29/01/2024
*Breathe Easy ! ಅಸ್ತಮಾ ಬಗೆಗಿನ ಅರಿವು ಹಾಗೂ ಅಸ್ತಮಾ ನಿವಾರಣೆಗಾಗಿ ಆಯುರ್ವೇದ*
ಚಳಿಗಾಲದ ಒಣ ಹವೆ, ಶೀತಲ ಗಾಳಿಯಿಂದ ವಾತಾವರಣದಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತದೆ. ಇದಕ್ಕೆ ಅನುಸಾರವಾಗಿ ಶರೀರದಲ್ಲಿಯೂ ಸಾಕಷ್ಟು ಬದಲಾವಣೆಗಳು ಉಂಟಾಗಿ ಆರೋಗ್ಯಕ್ಕೆ ಸಾಕಷ್ಟು ಸವಾಲು ಹಾಗೂ ಖಾಯಿಲೆಗಳನ್ನು ತಂದೊಡ್ಡುತ್ತದೆ. ಎಲ್ಲಾ ಕಾಲದಲ್ಲಿ ಕಂಡುಬಂದರೂ ವಿಶೇಷವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಬಾಧಿಸುವ ಖಾಯಿಲೆ ಎಂದರೆ ಅಸ್ತಮಾ. ಅಸ್ತಮಾವು ಶ್ವಾಸಕೋಶಗಳಿಗೆ ಸಂಬಂಧಿಸಿದ ಒಂದು ದೀರ್ಘಕಾಲಿನ ಅನಿಯಮಿತ, ಸರಣಿಗಳಲ್ಲಿ ಕಂಡುಬರುವ ಖಾಯಿಲೆಯಾಗಿದ್ದು, ಇಂದು ಭಾರತದಲ್ಲಿ ಸರಿಸುಮಾರು ೩೪ ಬಿಲಿಯನ್ ಜನರನ್ನು ಬಾಧಿಸುತ್ತಿದೆ.
*ಅಸ್ತಮಾ ಎಂದರೇನು?*
ಅಸ್ತಮಾವು ಉಸಿರಾಟದ ತೊಂದರೆಯನ್ನುಂಟು ಮಾಡುವ ಒಂದು ದೀರ್ಘಕಾಲಿನ ಖಾಯಿಲೆಯಾಗಿರುತ್ತದೆ. ಇದರಿಂದಾಗಿ ರೋಗಿಗೆ ಉಬ್ಬಸ, ಕೆಮ್ಮು, ಎದೆಯಲ್ಲಿ ಬಿಗಿತದ ಅನುಭವ ಮುಂತಾದ ಲಕ್ಷಣಗಳು ಕಾಣಿಸಿಕೊಂಡು ಉಸಿರಾಟದ ಸಮಸ್ಯೆಯನ್ನು ತಂದುಡ್ಡುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿಗಿಂತ ಭಿನ್ನವಾಗಿ ಅಸ್ತಮಾ ರೋಗಿಗಳಲ್ಲಿ ಶ್ವಾಸಕೋಶದ ವಾಯುಮಾರ್ಗಗಳ ಸಂವೇದನಾಶೀಲತೆಯು ಹೆಚ್ಚಿರುತ್ತದೆ. ಇದರಿಂದಾಗಿ ಅಸ್ತಮಾ ರೋಗಿಯು ಧೂಳು, ಶೀತಲಗಾಳಿ ಮುಂತಾದ ಪ್ರಚೋದಕ ಕಾರಣಗಳ ಸಂಪರ್ಕಕ್ಕೆ ಒಳಪಟ್ಟಾಗ ಶ್ವಾಸನಾಳಗಳ ಉರಿಯೂತ ಉಂಟಾಗಿ ವಾಯುಮಾರ್ಗಗಳು ಕಿರಿದಾಗಿ ಮೇಲ್ಕಂಡಂತೆ ಉಸಿರಾಟದ ತೊಂದರೆಗಳನ್ನುಂಟುಮಾಡುತ್ತದೆ.
*ಅಸ್ತಮಾಕ್ಕೆ ಕಾರಣಗಳೇನು?*
ಅಸ್ತಮಾವು ಅನುವಂಶಿಕ ಅಂಶಗಳು, ಅಲರ್ಜಿ ಹಾಗೂ ಪರಿಸರದಲ್ಲಿನ ಇತರ ಪ್ರಚೋದಕ ಕಾರಣಗಳ ಸಮೀಕರಣದಿಂದಾಗಿ ಉಂಟಾಗುತ್ತದೆ.
*ಅಸ್ತಮಾ ಪ್ರಚೋದಕ ಕಾರಣಗಳು* :-
* ಅಲರ್ಜಿ : ಶ್ವಾಸಕೋಶದ ಅಲರ್ಜಿಗೆ ಕಾರಣವಾಗುವಂತಹ ಸೂಕ್ಷ್ಮ ಕಣಗಳಾದ ಹೂವುಗಳ ಪರಾಗರೇಣುಗಳು, ಶಿಲೀಂದ್ರ ಕಣಗಳು (ಬೂಸ್ಟ್) ಹಾಗೂ ನಿರಂತರವಾಗಿ ಮನುಷ್ಯರ ಸಂಪರ್ಕ ಹೊಂದಿರುವ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳ ರೋಮ ಹಾಗೂ ಚರ್ಮದ ಹೊಟ್ಟು ಮುಂತಾದ ಸೂಕ್ಷ್ಮಕಣಗಳ ಉಸಿರಾಡುವಿಕೆ ಅಸ್ತಮಾವನ್ನು ಪ್ರಚೋದಿಸುತ್ತದೆ.
* ಇನ್ಫೆಕ್ಷನ್ : ಶರೀರದಲ್ಲಿ ಬ್ಯಾಕ್ಟೀರಿಯಾ, ವೈರಸ್ ಮುಂತಾದ ಕಾರಣಗಳಿಂದ ಉಂಟಾದ ಸೋಂಕು (Infection) ಅಸ್ತಮಾವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ನೆಗಡಿ, ಕೆಮ್ಮು, ಶ್ವಾಸಕೋಶದ ಸೋಂಕು ಉಂಟಾದ ಸಂದರ್ಭದಲ್ಲಿ ಅಸ್ತಮಾದ ಲಕ್ಷಣಗಳು ಹೆಚ್ಚಾಗುವುದನ್ನು ಕಾಣಬಹುದು.
* ಚಳಿಗಾಲದ ಶೀತಲಗಾಳಿ, ಒಣ ಹವೆ ಹಾಗೂ ವಾತಾವರಣದಲ್ಲಾಗುವ ಹಠಾತ್ ಬದಲಾವಣೆಗಳು ಅಸ್ತಮಾ ಹೆಚ್ಚಳಕ್ಕೆ ಕಾರಣವಾಗುತ್ತದೆ.
* ತೀಕ್ಷವಾದ ಪರಿಮಳ, ಆಸ್ಪಿರಿನ್,ನೋವುನಿವಾರಕಗಳು ಮುಂತಾದ ಕೆಲವು ಔಷಧಿಗಳು, ತೀವ್ರ ಮಾನಸಿಕ ಒತ್ತಡ ಇಂತಹ ಸಂದರ್ಭಗಳು ಅಸ್ತಮಾವನ್ನು ಪ್ರಚೋದಿಸುವ ಇನ್ನಿತರ ಕಾರಣಗಳಾಗಿವೆ.
*ಅಸ್ತಮಾದ ಲಕ್ಷಣಗಳು ಇಂತಿವೆ* :
ಅಸ್ತಮಾವು ದೀರ್ಘಕಾಲಿನ ವ್ಯಾಧಿಯಾಗಿದ್ದರೂ ಇದರ ಲಕ್ಷಣಗಳು ನಿಯಮಿತವಾಗಿ ಕಂಡುಬರುವುದಿಲ್ಲ. ಅಂದರೆ ಅನಿಯಮಿತವಾಗಿ, ಸರಣಿಯಲ್ಲಿ ಆಗೊಮ್ಮೆ ಈಗೊಮ್ಮೆ ಆಹಾರ, ವಿಹಾರ ಹಾಗೂ ಪರಿಸರದಲ್ಲಿನ ಪ್ರಚೋದಕ ಸಂದರ್ಭಗಳು ಒದಗಿಬಂದಾಗ ರೋಗಿಗಳಲ್ಲಿ ಅಸ್ತಮಾದ ಲಕ್ಷಣಗಳು ಪ್ರಕಟಗೊಳ್ಳುತ್ತವೆ.
ಅಸ್ತಮಾದ ಪ್ರಮುಖ ಲಕ್ಷಣ ಉಸಿರಾಡಲು ತೊಂದರೆ ಅಥವಾ ಉಬ್ಬಸ. ಇದರ ಜೊತೆಗೆ ರೋಗಿಯು ಉಸಿರಾಡುವಾಗ ಗೂರಲು ದ್ವನಿ ಹೊರಹೊಮ್ಮುವುದು, ಎದೆಯಲ್ಲಿ ಬಿಗಿಗಟ್ಟಿದ ಅನುಭವ, ಕೆಮ್ಮು, ಕಫ ಬರುವುದು ಮುಂತಾದ ಲಕ್ಷಣಗಳು ಕಂಡುಬರುತ್ತದೆ. ಈ ಲಕ್ಷಣಗಳು ಬೆಳಗಿನ ಜಾವ, ರಾತ್ರಿಯ ಸಂದರ್ಭದಲ್ಲಿ ಹೆಚ್ಚಾಗುತ್ತದೆ. ಇದಲ್ಲದೆ ಪ್ರಚೋದಕ ಕಾರಣಗಳಾದ ಧೂಳು, ಅಲರ್ಜಿ, ಸೋಂಕು ಮುಂತಾದ ಸಂದರ್ಭದಲ್ಲಿ ಲಕ್ಷಣಗಳು ಕಾಣಿಸುತ್ತದೆ.
ಉಬ್ಬಸವು COPD ಮುಂತಾದ ಇತರ ರೋಗಗಳಲ್ಲಿಯೂ ಕಂಡುಬರುವುದರಿಂದ ರೋಗಿಗಳು ವೈದ್ಯರುಗಳನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆಗಳನ್ನು ಮಾಡಿಸಿ ಅಸ್ತಮಾದ ಇರುವಿಕೆಯನ್ನು ಖಾತರಿಪಡಿಸಿಕೊಳ್ಳಬೇಕಾಗುತ್ತದೆ.
*ಅಸ್ತಮಾಕ್ಕೆ ಆಯುರ್ವೇದ* :
ಅಸ್ತಮಾದಲ್ಲಿ ವಿವರಿಸುವ ಲಕ್ಷಣಗಳು ಆಯುರ್ವೇದದಲ್ಲಿ ಉಲ್ಲೇಖವಿರುವ `ತಮಕ ಶ್ವಾಸ' ಎಂಬ ಖಾಯಿಲೆಯ ಲಕ್ಷಣಗಳನ್ನು ಹೋಲುತ್ತದೆ. ಆಯುರ್ವೇದದಲ್ಲಿ ಇತರ ಲಕ್ಷಣ, ಸಾಧ್ಯ ಅಸಾಧ್ಯತೆ ಹಾಗೂ ಚಿಕಿತ್ಸೆಯನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಇಂದು ಇದೇ ಆಧಾರದಲ್ಲಿ ರೋಗದ ತೀವ್ರತೆ, ರೋಗಿಯ ದೇಹದ ಪ್ರಕೃತಿಗೆ ಅನುಗುಣವಾಗಿ ಔಷಧಿ ಪಂಚಕರ್ಮ ಹಾಗೂ ಇದಕ್ಕೆ ಪೂರಕವಾದ ಪ್ರಾಣಾಯಾಮದ ಸಂಯೋಜಿತ ಪ್ರಯೋಗದಿಂದ ಅಸ್ತಮವನ್ನು ಹತೋಟಿಗೆ ತಂದು ನಿವಾರಿಸಬಹುದು.
ರೋಗವು ಪ್ರಾರಂಭಿಕ ಹಂತದಲ್ಲಿದ್ದು, ತೀವ್ರತೆ ಕಡಿಮೆಯಿದ್ದಾಗ ಡಯಟ್ (ಪಥ್ಯಾಹಾರ) ಔಷಧಿ ಹಾಗೂ ಪ್ರಾಣಾಯಾಮದ ಸಹಾಯಮಾತ್ರದಿಂದ ಅಸ್ತಮವನ್ನು ಹೋಗಲಾಡಿಸಬಹುದು. ಅಸ್ತಮಾ ಸಮಸ್ಯೆ ತೀವ್ರವಾಗಿದ್ದಲ್ಲಿ ಪಂಚಕರ್ಮ ಚಿಕಿತ್ಸೆಯ ಪ್ರಮುಖ ಭಾಗಗಳಾದ ವಮನ, ವಿರೇಚನದ ಯಥೋಚಿತ ಪ್ರಯೋಗದಿಂದ ಅಸ್ತಮಕ್ಕೆ ಕಾರಣವಾಗುವ ಟಾಕ್ಸಿನ್ಸ್ (ಕಲ್ಮಶ) ಗಳನ್ನು ಹೊರಹಾಕಿ ಶೀಘ್ರವಾಗಿ ಹತೋಟಿಗೆ ತಂದು ನಂತರ ಸೂಕ್ತ ಔಷಧಿಗಳ ಬಳಕೆ ಹಾಗೂ ಪ್ರಾಣಾಯಾಮದ ಪ್ರಯೋಗದಿಂದ ಅಸ್ತಮಾವನ್ನು ಹೋಗಲಾಡಿಸಬಹುದಾಗಿದೆ. ಈ ರೀತಿಯಾಗಿ ನಮ್ಮಲ್ಲಿ ಇಂದು ಅನೇಕ ರೋಗಿಗಳು ಪದೇ ಪದೇ ಕಾಡುವ ಉಸಿರಾಟದ ಸಮಸ್ಯೆಯಿಂದ ಹೊರಬಂದು ಆರಾಮದಾಯಕ ಜೀವನ ಸಾಗಿಸುವಲ್ಲಿ ಆಯುರ್ವೇದವು ಸಹಕಾರಿಯಾಗಿದೆ.
ಡಾ. ಅವಿನಾಶ್ ಶಾಂತಿಮೂಲೆ
MD(PhD)
ತಜ್ಞ ಆಯುರ್ವೇದ ವೈದ್ಯರು
ರಕ್ಷಾ ಆಯುರ್ವೇದ ಆಸ್ಪತ್ರೆ
8762121216