
12/10/2024
ದೈತ್ಯರ ವಿರುದ್ಧ ವಿಜಯ ಸಾಧಿಸಿದ ವಿಜಯದಶಮಿ :-
ಶರನ್ನವರಾತ್ರಿಯ ಕೊನೆಯ ದಿನವೇ ವಿಜಯದಶಮಿ. ಆದಿಶಕ್ತಿಯು ಮಹಿಷಾಸುರನ ಸಂಹಾರ ಮಾಡಲು ಯುದ್ಧವನ್ನು ಎಡೆಬಿಡದೆ ಹಲವಾರು
ದಿನಗಳು ಮಾಡಿ ಶುಂಭ -ನಿಶುಂಭ- ರಕ್ತ ಬೀಜಾ ಸುರನಂಥ ದುಷ್ಟರನ್ನೆಲ್ಲ ಸಂಹರಿಸಿ, ಕೊನೆಯಲ್ಲಿ ಅಂದರೆ ಹತ್ತನೇ ದಿನ ಮಹಿಷಾಸುರನನ್ನು ಸಂಹರಿಸಿ ವಿಜಯ ಸಾಧಿಸಿದ ದೇವಿಯ ನೆನಪಿಗಾಗಿ ಈ ಹಬ್ಬವನ್ನು ಮಾಡುತ್ತಾರೆ.
ಸಡಗರ, ಸಂಭ್ರಮದಿಂದ, ಆಚರಿಸುವ ಹಬ್ಬವೇ ವಿಜಯದಶಮಿ. ಇದನ್ನು ದೇಶಾದ್ಯಂತ ಆಚರಿಸುತ್ತಾರೆ. ಇದಕ್ಕೆ ಪುರಾಣ ಕಥೆಗಳ ಹಿನ್ನೆಲೆಯೂ ಇದೆ.
ವಿಜಯದಶಮಿ ದಿನ ಮನೆದೇವರ ಪೂಜೆಗೆ ವಿಶೇಷ ಮಹತ್ವವಿದೆ. ಒಂಬತ್ತು ದಿನಗಳ ಕಾಲವು ದೇವಿಯನ್ನು ಆರಾಧಿಸಿ ಪೂಜಿಸಲಾಗಿದೆ. ಇಂದು ಸಹ ಮುಂಜಾನೆಯೇ, ಸ್ನಾನ ಮಾಡಿ, ಶುಭ್ರ ಬಟ್ಟೆ ಉಟ್ಟು, ನಿತ್ಯ ದೇವರು ಮತ್ತು ವಿಶೇಷವಾಗಿ ಮನೆದೇವರ ಪೂಜೆಯನ್ನು ಮಾಡಿ ಮನೆ ದೇವರಿಗೆ ಮುಡಿಪು ಕಟ್ಟುತ್ತಾರೆ. ವಿಜಯದಶಮಿ ಬಹಳ ಪವಿತ್ರವಾದ ಪುಣ್ಯಕರವಾದ ದಿನ. ಯಾವುದೇ ಶುಭ ಕಾರ್ಯ ಮಾಡುವುದಕ್ಕೆ , ಮುಹೂರ್ತ ನೋಡುವುದೇ ಬೇಡ. ಇಂದು ಮಕ್ಕಳ ಅಕ್ಷರಾಭ್ಯಾಸ, ಹೊಸ ಮನೆ ಗೃಹಪ್ರವೇಶ, ನಾಮಕರಣ, ಯಾವುದೇ ಶುಭ ಕಾರ್ಯ ಮಾಡಲು ಇಂದು ಪ್ರಶಸ್ತವಾದ ದಿನ. ವಿಜಯದಶಮಿಯಂದು ಮನೆ ಮಂದಿಯೆಲ್ಲರೂ, ಮನೆಯ ದೇವರ ಪೂಜೆಯಲ್ಲಿ ಭಾಗಿಯಾಗುತ್ತಾರೆ. ನೈವೇದ್ಯ, ಮಂಗಳಾರತಿ ನಮಸ್ಕಾರದ ನಂತರ ಎಲ್ಲರೂ ಕೈಜೋಡಿಸಿ ದೇವರನ್ನು ಪ್ರಾರ್ಥಿಸುತ್ತಾರೆ. ( ಅವರವರ ಮನೆದೇವರನ್ನು ಬೇಡಿಕೊಳ್ಳುತ್ತಾರೆ) ತಿರುಪತಿ, ತಿಮ್ಮಪ್ಪ , ಬಂಗಾರ ಗಿರಿವಾಸ, ವೆಂಕಟರಮಣ ಸ್ವಾಮಿ ನನ್ನಿಂದ ಗೊತ್ತಿದ್ದೋ ಗೊತ್ತಿಲ್ಲದೆಯೋ, ತಪ್ಪಾಗಿದ್ದರೆ ಕ್ಷಮಿಸಿಬಿಡು, ಇಂದಿನಿಂದ ಅಂತ ತಪ್ಪುಗಳನ್ನು ಸರ್ವತಾ ಮಾಡುವುದಿಲ್ಲ. ಇನ್ನು ಮುಂದೆ ಯಾವುದೇ ತಪ್ಪು ಆಗದಂತೆ ನೀನೆ ನಮ್ಮನ್ನು ರಕ್ಷಿಸಿ, ಸಲಹ ಬೇಕು. ವಿದ್ಯಾ, ಬುದ್ಧಿ, ಜ್ಞಾನ, ಆಯುರಾರೋಗ್ಯಾದಿಗಳನ್ನು ಕೊಟ್ಟು ಕಾಪಾಡು ಭಗವಂತ ಎಂದು ಹೇಳಿಕೊಟ್ಟ ಹಾಗೆ, ಹೇಳುವಾಗ ಎಲ್ಲರ ಕಣ್ಣಲ್ಲೂ ನೀರು ಬರುತ್ತಿತ್ತು. ಮುಡಿಪೆಂದು ದೇವರಿಗೆ ಹಣ ಹಾಕಿ ಕಟ್ಟಿಟ್ಟ ಗಂಟನ್ನು ( ಹೆಚ್ಚು ಕಡಿಮೆ ನಾಲಕ್ಕಾಣೆ ಯಿಂದ ಹಿಡಿದು ಒಂದು ಕಾಲು ರೂಪಾಯಿ, 11ರೂ 25 ಪೈಸೆ ತನಕ) ಹಾಕಿ ಕಟ್ಟಿದ ಗಂಟನ್ನೇ ತಿಮ್ಮಪ್ಪನಿಗೆ ಮುಡಿಪಿಟ್ಟ ಗಂಟು ಎನ್ನುತ್ತಿದ್ದರು. ಆಶ್ಚರ್ಯ ಎಂದರೆ ಬಂಗಾರದ ನಾಣ್ಯ ಗಳನ್ನೆ ಹಾಕಿ ಕಟ್ಟಿದ ಗಂಟು ಎಂಬ ಭಾವ ಎಲ್ಲರಲ್ಲೂ ಇತ್ತು. ದೇವರಿಗೆ ಕಟ್ಟಿಟ್ಟ ಮುಡಿಪನ್ನು ಮನೆಯಲ್ಲಿ ಯಾರಾದರೂ ಕ್ಷೇತ್ರಕ್ಕೆ ಹೋದರೆ, ಅಥವಾ ಹೋಗುವವರಿದ್ದರೆ ಅಲ್ಲಿ ತನಕ ಹಾಕುತ್ತಿದ್ದ ತಪ್ಪು ಕಾಣಿಕೆ, ಹರಕೆ ಕಾಣಿಕೆ, ಎಲ್ಲವನ್ನೂ ಸೇರಿಸಿ ಕ 51 ಅಥವಾ 108, ಹೀಗೆ ಕಳಿಸುತ್ತಿದ್ದರು. ಇಷ್ಟು ಸಂಭ್ರಮದ ವಿಜಯದಶಮಿ ಹಬ್ಬ ತಿರುಪತಿಯಲ್ಲಿಯೇ ಇದ್ದಂತ ಅನುಭವ ಆಗುತ್ತಿತ್ತು.
ಇಳಿ ಹೊತ್ತು 4:00 ಗಂಟೆ ನಂತರ. ಕೈ ಕಾಲು ಮುಖ ತೊಳೆದು, ಒಳ್ಳೆ ಬಟ್ಟೆ ಹಾಕಿಕೊಂಡು ಸರಸ್ವತಿ ಹಾಗೂ ಗೊಂಬೆ ಪಟದ ಮುಂದೆ ದೀಪ ಹಚ್ಚಿ. ಎಲ್ಲರೂ ಕುಳಿತು, ಹಿರಿಯರು ಹೇಳಿಕೊಟ್ಟಂತೆ, ತಾಯಿ ಶೃಂಗೇರಿ ಶಾರದಾಂಬೆ ದೇವಿಗೆ, ಪತ್ರ ಬರೆಯುವ ಸಂಭ್ರಮ. ವಿಳಾಸ ಬರೆದು, ಅರಿಶಿಣ ಕುಂಕುಮ ಹೂವು ಏರಿಸಿ ಸರಸ್ವತಿ ಮುಂದೆ ಇಟ್ಟು . ಆರತಿ ಮಾಡಿ ನಮಸ್ಕರಿಸಿ, ಹಿರಿಯರಿಗೆಲ್ಲಾ ಶಮಿಪತ್ರೆ ಕೊಟ್ಟು ಈ ಪತ್ರೆಯನ್ನು ಬನ್ನಿ ಬಂಗಾರ ಎಂದು ಕರೆಯು ತ್ತಾರೆ. ಇದನ್ನು ಕೊಟ್ಟು ನಿಮ್ಮ ಬಾಳು ಬಂಗಾರವಾಗಲಿ ಎಂದು ಹೇಳುತ್ತಾರೆ. " ಶಮಿ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ, ಅರ್ಜುನಸ್ಯ ಧನುರ್ಧಾ ರಿ ರಾಮಸ್ಯ ಪ್ರಿಯದರ್ಶಿನೀ" ಈ ಶ್ಲೋಕವನ್ನು ಹೇಳಿ ನಮಸ್ಕರಿಸಬೇಕು, ಆಗ ಹಿರಿಯರು, " ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕ ರಾಯ ಚ ಸರ್ವಾರಿಷ್ಟ ವಿನಾಶಾಯ ನಿಂಬಕಂದಲಭಕ್ಷಣಮ್" ( ಈ ಶ್ಲೋಕವನ್ನು ಯುಗಾದಿ ಹಬ್ಬದಂದು ಬೇವು ಬೆಲ್ಲ ಕೊಡುವಾಗಲು ಹೇಳುತ್ತಾರೆ) ಎಂದು ಹೇಳಿ ನಾವು ಕೊಟ್ಟ ಶಮೀಪತ್ರೆಯಲ್ಲಿ ಸ್ವಲ್ಪ ಪ್ರಸಾದ ರೂಪದಲ್ಲಿ ಕೊಡು ತ್ತಾರೆ. ಅಂದು ಸರಸ್ವತಿ ಮತ್ತು ಗೊಂಬೆ ಪಟವನ್ನು ಕದಲಿಸುತ್ತಾರೆ. ನಂತರ ಊರಿನಲ್ಲಿರುವ ಎಲ್ಲರ ಮನೆಗಳಿಗೂ ಹೋಗಿ ಶಮಿ ಪತ್ರೆ ಕೊಟ್ಟು ಹಿರಿಯರಿಗೆ ನಮಸ್ಕರಿಸಿ ಬರಬೇಕು. ಒಂದೂ ಮನೆಯನ್ನು ಬಿಡದೆ ಎಲ್ಲರ ಮನೆಗೂ ಹೋಗಿ ಬರುತ್ತಿದ್ದೆವು. ನಾವು ಅವರಗಳ ಮನೆಗೆ ಹೋಗದಿದ್ದರೆ ಅಥವಾ ಯಾರಾದರೂ ನಮ್ಮ ಮನೆಗೆ ಬರದಿದ್ದರೆ, ಮನಸಲ್ಲಿ ಕಸಿ ವಿಸಿ ಆಗುತ್ತಿತ್ತು.
ಊರು ಮನೆ ಬಾಗಿಲು ಅಂದಮೇಲೆ, ಯಾವುದಾದರೂ ಸಂದರ್ಭದಲ್ಲಿ ಸಣ್ಣಪುಟ್ಟ ಕಾರಣಗಳಿಗೆ ಸ್ವಲ್ಪ ಬೇಸರವಾಗಿರುತ್ತದೆಯೋ ಏನು ಗೊತ್ತಿರಲ್ಲ. ಇಂತಹ ಹಬ್ಬ ಹರಿದಿನಗಳಂದು, ಮನೆಗಳಿಗೆ ಹೋಗಿ ಮಾತನಾಡಿಸಿ, ಶಮಿ ಪತ್ರೆ ಕೊಡುವುದು, ಸಂಕ್ರಾಂತಿಯಂದು ಎಳ್ಳು ಬೆಲ್ಲ ಬೀರುವುದು ಇದರಿಂದ ಸಣ್ಣ ಪುಟ್ಟ ಮನಸ್ತಾಪಗಳು ಕರಗಿ ಸ್ನೇಹ ಸಂಬಂಧ ಉಳಿಯುತ್ತಿತ್ತು. ಇದನ್ನೆ ಲ್ಲ ಹಿಂದಿನವರು ಊರಿನವರ ಒಗ್ಗಟ್ಟಿಗಾಗಿ ಕಂಡುಕೊಂಡು ಉಪಾಯಗಳು. ಹೀಗೆ ಆಚರಿಸಿದ ನವರಾತ್ರಿ ಹಬ್ಬದ ಸಂಭ್ರಮ, ಎಂದಿಗೂ ಮರೆಯದೆ ಉಳಿದುಬಿಟ್ಟಿದೆ. ವಿಜಯದಶಮಿ ಒಂದು ತರಹ ಊರ ಹಬ್ಬವು ಹೌದು, ತಾಲೂಕು, ಜಿಲ್ಲೆಗಳಂಥ ಊರಿನಲ್ಲಿ ಈ ಆಚರಣೆಗಾಗಿ ದೊಡ್ಡ ಮೈದಾನವನ್ನು ಆಯ್ದುಕೊಂಡು, ಎಲ್ಲಾ ಸೇರಿ ಆಚರಿಸುತ್ತಾರೆ.
ವಿಜಯ ದಶಮಿಯ ಆಚರಣೆಗೆ ಪೌರಾಣಿಕ ಹಿನ್ನೆಲೆಯಂತೆ , ತ್ರೇತಾಯುಗ ದಲ್ಲಿ ರಾವಣನಿಂದ ಸೀತೆಯನ್ನು ಬಿಡಿಸಿಕೊಂಡು ಬರಲು ಶ್ರೀರಾಮನು, ಲಕ್ಷ್ಮಣ ಸಮೇತ, ವಾನರ ಸೇನೆಯೊಂದಿಗೆ ರಾವಣನ ಮೇಲೆ ಯುದ್ಧ ಮಾಡುತ್ತಾನೆ. ವಿಜಯದಶಮಿ ದಿನದಂದು ರಾವಣನನ್ನು ಸಂಹಾರ ಮಾಡುತ್ತಾರೆ, ದುಷ್ಟರ ಮೇಲೆ ವಿಜಯ ಸಾಧಿಸಿದ ದಿನ ಎಂಬ ಸಂಕೇತವಾಗಿ ರಾವಣನ ಪ್ರತಿ ಕೃತಿಯನ್ನು ದಹನ ಮಾಡಿ ಸಂಭ್ರಮ ಪಡುತ್ತಾರೆ. ದಶಕಂಠನ 10 ತಲೆಗಳನ್ನು ಸಂಹರಿಸಿದ ದಿನವನ್ನು 'ದಶ ಹರ' ಎಂದು ಕರೆದರು. ಅದೇ ಮುಂದೆ ಜನರ ಬಾಯಲ್ಲಿ 'ದಸರಾ' ಎಂದು ಆಯಿತು ಎಂದು ಹೇಳುತ್ತಾರೆ.
ದ್ವಾಪರಯುಗದಲ್ಲಿ ಪಾಂಡವರು ಕೌರವರ ಮೋಸದ ದ್ಯೂತದಲ್ಲಿ ಸೋತು, ಷರತ್ತಿನಂತೆ 12 ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸಕ್ಕೆ ಹೋಗುವ ಮೊದಲು ತಮ್ಮ ಆಯುಧಗಳನ್ನೆಲ್ಲಾ ಶಮಿ ವೃಕ್ಷದಲ್ಲಿ ಇಟ್ಟು ಕಾಪಾಡುವಂತೆ ಪ್ರಾರ್ಥಿಸಿ ಹೋಗಿದ್ದರು. ಅದು ಯಾರು ಕಣ್ಣಿಗೂ ಬೀಳದಂತೆ ಶಮಿ ವೃಕ್ಷದೇವಿ ಕಾಪಾಡಿದ್ದಳು. ಅವರ ವನವಾಸ ಮುಗಿದು, ಹಸ್ತಿನಾಪುರದಲ್ಲಿ ತಮ್ಮ ರಾಜ್ಯವನ್ನು ಕೊಡುವಂತೆ ಕೇಳುವ ಸಮಯಕ್ಕೂ, ಇದಕ್ಕೆ ಮುನ್ನುಡಿಯಂತೆ, ವಿರಾಟನ ಗೋಗ್ರಹಣಕ್ಕೆ ಪ್ರತಿಯಾಗಿ ಯುದ್ಧ ನಡೆದು ಪಾಂಡವರು ವಿಜಯ ಸಾಧಿಸಿದರು. ಆ ಯುದ್ಧ ನಡೆದದ್ದು ವಿಜಯದಶಮಿಯ ದಿನ ಆಗಿತ್ತು. ಈ ಸಂತೋಷಕ್ಕಾಗಿ ವಿಜಯದಶಮಿ ಆಚರಿಸಿದರು. ವಿಜಯದಶಮಿಯ 'ಶಮಿ ಪತ್ರೆ' ಅಥವಾ 'ಬನ್ನಿ' ಎಂದು ಕರೆಯುವ ಈ ಮರ ಅತ್ಯಂತ ಶ್ರೇಷ್ಠ ವೃಕ್ಷಗಳಾದ ಅರಳಿ, ಅತ್ತಿ, ಪಾರಿಜಾತ, ತೆಂಗು, ಇಂಥ ಕೆಲವು ಪವಿತ್ರವಾದ ವೃಕ್ಷಗಳ ಸಾಲಿಗೆ ಶಮಿವೃಕ್ಷ ಸೇರುತ್ತದೆ. ಈ ವೃಕ್ಷದ ಮಹತ್ವದ ಕುರಿತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಕೃತಯುಗದಲ್ಲಿ ದೇವ ದಾನವರು ಕ್ಷೀರಸಾಗರವನ್ನು ಕಡೆದಾಗ ಬಂದಂಥ ಪವಿತ್ರ ವಸ್ತುಗಳಲ್ಲಿ ಪಾರಿಜಾತ ,ತುಳಸಿ, ಬೋಧಿ ವೃಕ್ಷ ಗಳಂತೆ 'ಶಮಿ' ವೃಕ್ಷ ಬಂದಿತು. ಇದರಲ್ಲಿ ಅಗ್ನಿಯ ಸನ್ನಿಧಾನವಿದೆ. ಇದು ಬಹಳ ಗಟ್ಟಿಯಾಗಿದ್ದು ಪರಾಶಕ್ತಿಯ ಪ್ರತಿರೂಪವೆಂದು ಪೂಜಿಸುತ್ತಾರೆ.
ಇದರ ಎಲೆ ತೊಗಟೆ ಕಾಂಡ ಎಲ್ಲವನ್ನು ಔಷಧಿಯಾಗಿ ಬಳಸುತ್ತಾರೆ. ಎಂಥಾ ಕಾರ್ಕೋಟಕ ವಿಷವನ್ನು ತೆಗೆಯುವ ಶಕ್ತಿ ಇದಕ್ಕಿದೆ ಎಂದು ಹೇಳುತ್ತಾರೆ. ಆಯುರ್ವೇದದಲ್ಲಿ ಹೆಚ್ಚು ಬಳಕೆಯಲ್ಲಿದೆ. ವಿಜಯದಶಮಿಯ ಸಮಯದಲ್ಲಿ ಶಮಿಪತ್ರೆಯನ್ನು ಊರಾಚೆ ಇರುವ ಮರದ ಹತ್ತಿರ ಹೋಗಿ ಮರಕ್ಕೆ ಪೂಜೆ ಮಾಡಿ ಬನ್ನಿ ಟೊಂಗೆಗಳನ್ನು ತಂದು ಕೇಳಿದವರು ಅಷ್ಟಷ್ಟು ಕೊಟ್ಟು, ಮನೆಗೆ ತಂದು ಪೂಜೆ ಗಿಟ್ಟ ಪುಸ್ತಕದ ಮೇಲಿಟ್ಟು ಪೂಜಿಸುವುದರಿಂದ ಮನೆಯಲ್ಲಿ ಶಾಂತಿ, ಸಮಾಧಾನ ಧನ ಧಾನ್ಯ, ಅಭಿವೃದ್ಧಿ ಜೊತೆ, ಹಿಡಿದ ಕಾರ್ಯದಲ್ಲಿ ಜಯ ದೊರೆಯುತ್ತದೆ. ಎಂಬ ನಂಬಿಕೆ ಜನಮನಗಳಲ್ಲಿ ಹಾಸು ಹೊಕ್ಕಾಗಿದೆ.
ನಮಸ್ತೆ ಪುಂಡರಿಕಾಕ್ಷಾ ನಮಸ್ತೇ ಪುರುಷೋತ್ತಮ !
ನಮಸ್ತೆ ಸರ್ವ ಲೋಕಾತ್ಮನ್ನಮಸ್ತೇ ತಿಗ್ಮ ಚಕ್ರಿಣೇ!
ನಮೋ ಬ್ರಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯ ಚ
ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ!!