
27/11/2020
*ಕಾರ್ತೀಕ_ಶುದ್ಧ_ದ್ವಾದಶಿ.*
*" ಉತ್ಥಾನ ದ್ವಾದಶಿ" ಎಂದೂ ಕರೆಯುತ್ತಾರೆ.*
ತನ್ನಿಮಿತ್ತ ನಿಮಗೆ ತುಲಸಿಯ ಕತೆ.
ತುಳಸೀ ಕಟ್ಟೆಯಲ್ಲಿ ವಿಷ್ಣು ಸ್ವರೂಪವಾದ ನೆಲ್ಲಿ ಕೊಂಬೆಯನ್ನು ನೆಟ್ಟು "ತುಲಸೀ ಪೂಜೆ" ಮಾಡುವ ಸಂಪ್ರದಾಯ ಎಲ್ಲಕಡೆಗಳಲ್ಲಿದೆ.
ಆಷಾಢ ಶುದ್ಧ ಏಕಾದಶಿಯ "ಶಯನೈಕಾದಶಿ" ಯಂದು ಮಲಗಿದ ಮಹಾವಿಷ್ಣುವು ಇಂದು ಏಳುತ್ತಾನೆ.
ಆದ್ದರಿಂದ ಇದಕ್ಕೆ "ಉತ್ಥಾನ (ಏಳುವುದು) ದ್ವಾದಶಿ" ಎಂದು ಹೇಳುತ್ತಾರೆ.
*ಉತ್ಥಾನದ್ವಾದಶಿ_ತುಲಸೀ_ವಿವಾಹ*
ವಿಷ್ಣುವಿನ ಯೋಗನಿದ್ರಾಕಾಲದ ಆಷಾಢ ಶುದ್ಧ ದ್ವಾದಶಿಯಿಂದ,ಕಾರ್ತೀಕ ಶುದ್ಧ ದ್ವಾದಶಿವರೆಗಿನ ಈ ನಾಲ್ಕು ತಿಂಗಳು ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ.
ಉತ್ತರ ಕರ್ನಾಟಕ ಮತ್ತು ಕರಾವಳಿಯಲ್ಲಿ ಈಗಲೂ ಇದು ಚಾಲ್ತಿಯಲ್ಲಿದೆ.
ತುಲನೆ ಇಲ್ಲದ ಸಸ್ಯವಾದ್ದರಿಂದ ತುಲಸೀ ಎಂಬ ಹೆಸರು ಬಂದಿದೆ.
ಅಮೃತ ಮಂಥನದಲ್ಲಿ ವಿಷ್ಣುವು ಅಮೃತಕಲಶವನ್ನು ನೋಡಿದಾಗ ಅವನ ಕಂಗಳಿಂದ ಹೊರಟ ಆನಂದಾಶ್ರುವು ಅದರಲ್ಲಿ ಬಿದ್ದು ಲಕ್ಷ್ಮಿಯೇ ಸಸ್ಯವಾಗಿ ಉದ್ಭವಿಸಿದ ಗಿಡ ತುಲಸಿ.
ಕೃಷ್ಣನ ತುಲಾಭಾರದಲ್ಲಿ ಎಷ್ಟು ರತ್ನ ವಜ್ರ ವೈಢೂರ್ಯಾದಿಗಳಿಂದಲೂ ಮೇಲೇರದ ತಕ್ಕಡಿಗೆ ರುಕ್ಮಿಣಿ ಹಾಕಿದ ಒಂದು ತುಳಸೀದಳದಿಂದ ಅದು ಮೇಲೇರಿತು.
ಇದು ತುಳಸಿಯ ಶಕ್ತಿ.
ಉತ್ಥಾನ ದ್ವಾದಶಿಯಂದು ವಿಷ್ಣು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿವಾಹವಾದನು.
ಜಲಂಧರಾಸುರನು ಕಂಟಕನಾಗಿ ಅವನ ಪತ್ನಿಯ ಪಾತಿವ್ರತ್ಯ ಪ್ರಭಾವದಿಂದ ಸಂಹರಿಲಾಗದಿದ್ದಾಗ ವಿಷ್ಣುವು ಜಲಂಧರನ ರೂಪಧರಿಸಿ ಅವನ ಪತ್ನಿ ವೃಂದಾಳ ಪಾತಿವ್ರತ್ಯ ಭಂಗ ಮಾಡಿದ ನಂತರ ಜಲಂಧರನ ಸಂಹಾರ ಸಾಧ್ಯವಾಯಿತು.
ಬೃಂದಾಳ ಪಾತಿವ್ರತ್ಯವನ್ನು ಜಲಂಧರನ ರೂಪಧರಿಸಿ ಮೋಸದಿಂದ ಭಂಗ ಮಾಡಿ,ಅವಳೊಂದಿಗೆ ಸುಖಿಸಿ ಶೀಲಹರಣ ಮಾಡಿದ್ದರಿಂದ ಕುಪಿತಳಾದ ಬೃಂದೆಯು,
*ನನಗೆ ಪತಿಯೊಂದಿಗೆ ಸಮಾಗಮಕ್ಕೆ ಅನರ್ಹಳಾಗುವಂತೆ ಮಾಡಿ ಪತಿ ಸಂಗಮ ಸುಖ ವಂಚಿತಳಾಗಿಸಿದ ನಿನಗೂ ಬಹಳ ಕಾಲ ಪತ್ನಿಯಿಂದ ವಿಯೋಗವಾಗಲಿ" ಎಂದು ವಿಷ್ಣುವಿಗೆ ಶಾಪವಿತ್ತಳು.
ಬೃಂದಾಳಿಗೆ (ವೃಂದಾ) ವಿಷ್ಣುವು "ನೀನು ಪತಿವ್ರತೆ.ಪವಿತ್ರ ತುಳಸಿಯಾಗಿ ಪೂಜೆಗೊಳ್ಳು" ಎಂದು ವರವನ್ನಿತ್ತನು.
ಇದರ ಕುರುಹಾಗಿ ತುಲಸಿಕಟ್ಟೆಗೆ *ಬೃಂದಾವನ* ಎಂಬ ಹೆಸರು,
ಮತ್ತು ವಿಷ್ಣುಸ್ವರೂಪದ ನೆಲ್ಲಿಕೊಂಬೆಯನ್ನು ತುಲಸಿ ಗಿಡದೊಂದಿಗಿಟ್ಟು ಅಲಂಕರಿಸಿ ದೀಪಗಳನ್ನು ಹಚ್ಚಿ ತುಲಸೀ ವಿವಾಹ ಮಾಡಿ ನಾವು ಆಚರಿಸುತ್ತೇವೆ.
ಅಂದಿನವರೆಗೆ ನೆಲ್ಲಿಕಾಯಿಯನ್ನು ಯಾರೂ ತಿನ್ನುವುದಿಲ್ಲ.ಮನೆಗೆ ತರುವುದಿಲ್ಲ.ಅಲ್ಲಿಯವರೆಗೆನೆಲ್ಲಿಕಾಯಿಗೆ ಅಶೌಚ.
ಆ ದಿನ ತುಳಸಿಯೊಂದಿಗಿಟ್ಟು ಪೂಜಿಸಿದ ನಂತರ ಶುದ್ಧವೆಂದು ಕಿತ್ತು ಉಪಯೋಗಿಸುತ್ತಾರೆ.
ತುಲಸಿಯು ಔಷಧೀಯ ಸಸ್ಯ.
ಜಲಮಾಲಿನ್ಯ,ಅರ್ಬುದ,ಕೆಮ್ಮು,ಬೊಜ್ಜು,ಮರೆವು,ಮಧುಮೇಹ,ರಕ್ತದ ಏರೊತ್ತಡ,
ಸೊರಿಯಾಸಿಸ್,ಖಿನ್ನತೆ ಚರ್ಮರೋಗಗಳಿಗೆ ತುಲಸಿಯು ದಿವ್ಯೌಷಧ.
ತುಳಸಿಯಲ್ಲಿ ಬಿಳಿ ಮತ್ತು ಕರಿ_ತುಳಸಿ ಎಂದು ಎರಡು ಪ್ರಭೇದಗಳಿವೆ.
*ರಾಮತುಳಸಿ,ಕೃಷ್ಣತುಳಸಿ* ಎಂಬ ಹೆಸರುಗಳೂ ಇವೆ.
ಔಷಧೀಯ ಗುಣ ಎರಡಲ್ಲೂ ಒಂದೇ ರೀತಿ ಇದೆ.
ಸುಮಂಗಲಿಯರು ಪ್ರತಿದಿನ ತುಳಸಿ ಪೂಜೆ ಮಾಡುತ್ತಾರೆ.
ಶಾಲಗ್ರಾಮ ಮತ್ತು ಶಂಖದ ಮೇಲೆ ತಪ್ಪದೆ ತುಳಸಿಯ ಕುಡಿ ಇರಲೇ ಬೇಕು ಎಂದು ಶಾಸ್ತ್ರಗಳು ಸಾರಿವೆ.
ತುಳಸೀದಳ ಮಿಶ್ರಿತ ತೀರ್ಥ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ಕ್ಷೀರ ಸಮುದ್ರವನ್ನು ದೇವ-ದಾನವರು ಅಮೃತಕ್ಕಾಗಿ ಕಡೆದಾಗ ಅಮೃತೋದ್ಭವವಾದ ದಿನವೂ "ಉತ್ಥಾನದ್ವಾದಶಿ" ಯ ದಿನ.
ಹಾಗಾಗಿ *ಮಥನ_ದ್ವಾದಶಿ,ಕ್ಷೀರಾಬ್ಧಿ_ವ್ರತ*" ಎಂಬ ವ್ರತಾಚರಣೆಯೂ ಇಂದು ಆಚರಿಸುತ್ತಾರೆ.
ನಮಸ್ತುಲಸಿ ಕಲ್ಯಾಣೀ
ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವೀ
ನಮಃ ಸಂಪತ್ಪ್ರದಾಯಿನೀ ||
ತುಲಸಿಯ ಬಗ್ಗೆ ಇನ್ನೊಂದು ಕತೆ ಇದೆ.
" ತುಲಸೀ "
ಹಂಸಧ್ವಜನ ಮಗ ಧರ್ಮಧ್ವಜನಿಂದ ಅವನ ಪತ್ನಿ ಮಾಧವಿಯಲ್ಲಿ ಲಕ್ಷ್ಮಿಯ ಅಂಶದಿಂದ ಜನಿಸಿದವಳು ತುಲಸೀ.
ಈಕೆಯು ಬಾಲ್ಯದಲ್ಲಿಯೇ ಬದರಿಕಾಶ್ರಮದಲ್ಲಿ ತಪಸ್ಸು ಮಾಡಿ, ಬ್ರಹ್ಮನಿಂದ "ವಿಷ್ಣು ತನಗೆ ಪತಿಯಾಗಬೇಕೆಂದು" ವರ ಬೇಡಿದಳು.
ಬ್ರಹ್ಮನು "ನಿನ್ನ ಕೋರಿಕೆ ಈಡೇರುತ್ತದೆ.
ಆದರೆ ನೀನು ಗಿಡವಾಗುವೆ" ಎಂದನು.
ದಂಭಾಸುರನ ಮಗ ಶಂಖಚೂಡನು ಜೈಗೀಷವ್ಯ ಮುನಿಯಿಂದ ವಿಷ್ಣು ಮಂತ್ರೋಪದೇಶಪಡೆದು,ಪುಷ್ಕರ ಕ್ಷೇತ್ರದಲ್ಲಿ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದಿದ್ದನು.
ಅಕಸ್ಮಾತ್ತಾಗಿ ಇವರಿಬ್ಬರೂ ಸಂಧಿಸಿ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ನಾರದರು "ನಿನಗೆ ಶಂಖಚೂಡ,
ಅವನಿಗೆ ನೀನು ಅನುರೂಪ ವಧು-ವರರು" ಮದುವೆಯಾಗಿರಿ ಎಂದರು.
ಅವರ ಮಾತಿನಂತೆ ಅವರಿಬ್ಬರೂ ವಿವಾಹವಾದರು.
ಕೆಲಕಾಲದ ಬಳಿಕ ಶಂಖಚೂಡನು ದೇವತೆಗಳೊಂದಿಗಿನ ಯುದ್ಧದಲ್ಲಿ ಮಡಿದನು.
ವಿಷ್ಣುವು ಶಂಖಚೂಡನ ರೂಪದಲ್ಲಿ ಬಂದು "ನಾನು ದೇವತೆಗಳನ್ನು ಗೆದ್ದು ಬಂದೆನೆಂದಾಗ ಸಂತೋಷದಿಂದ ಅವನನ್ನುಪಚರಿಸಿ, ಸಮಾಗಮ ಹೊಂದಿದಾಗ,ಕೆಲವು ಕುರುಹುಗಳಿಂದ ಅವನು ಶಂಖಚೂಡನಲ್ಲವೆಂದು ತಿಳಿದು ದೂರ ಸರಿದು ನಿಂತಳು.ವಿಷ್ಣು ತನ್ನ ನಿಜರೂಪ ತೋರಿಸಿ ತಾನೇ ಶಂಖಚೂಡ,
ತುಲಸಿಯನ್ನು ವಿವಾಹವಾಗಲು ತಪಸ್ಸು ಮಾಡಿದ್ದೆ ಎಂದಾಗ ಶಂಖಚೂಡ ಮಡಿದ ಸುದ್ದಿ ಕೇಳಿ ತಾನು ಗಿಡವಾದಳು.
ದುರ್ವಾಸನ ಶಾಪದಿಂದ ಪದಭ್ರಷ್ಟನಾದ ಇಂದ್ರನು ದೇವ-ದಾನವರನ್ನು ಸೇರಿಸಿ ಕ್ಷೀರಸಮುದ್ರ ಕಡೆದಾಗ ಅಮೃತ ಕಲಶ ಬಂದಿತು.
ವಿಷ್ಣು ಅದನ್ನೆತ್ತಿಕೊಂಡಾಗ ಅವನ ಕಣ್ಣುಗಳಿಂದ ಹೊರಬಿದ್ದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಒಂದು ಸಣ್ಣ ಗಿಡ ಹುಟ್ಟಿತು.ಇದಕ್ಕೆ ತುಲನೆ ( ಹೋಲಿಕೆ ) ಇಲ್ಲವಾಗಿ ತುಲಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿಷ್ಣುವನ್ನು ಮದುವೆಯಾದನು.