15/08/2025
‘ತಂದೆ ಇಲ್ಲದ ಮಕ್ಕಳನ್ನು ತಾಯಿ, ಎಷ್ಟೇ ಕಷ್ಟವಾದರೂ ಸರಿ ಸಾಕುತ್ತಾಳೆ, ಬೆಳೆಸುತ್ತಾಳೆ, ಓದಿಸುತ್ತಾಳೆ, ಏಕಾಂಗಿಯಾಗಿಯೇ, ಯಾರ ನೆರವು ಸಿಗದಿದ್ರೂ ಪರವಾಗಿಲ್ಲ ಹಠಕ್ಕೆ ಬಿದ್ದು ಮಕ್ಕಳ ಭವಿಷ್ಯ ರೂಪಿಸುತ್ತಾಳೆ. ಆದರೆ, ತಾಯಿ ಇಲ್ಲದ ಮನೆಯ ಮಕ್ಕಳು ಬದುಕು ಕಟ್ಟಿಕೊಡುವುದು ತಂದೆಗೆ ಬಲುಕಷ್ಟ. ಹಾಗಾಗಿಯೇ, ತಾಯಿ ಇಲ್ಲದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ನೆರವು ನೀಡಲು ನಿರ್ಧರಿಸಿದೆ..’ ಅಂತಾರೆ ತಮಿಳು ನಟ ಸೂರ್ಯ.
ತಮಿಳು ನಟ ಸೂರ್ಯ, 15 ವರ್ಷಗಳಲ್ಲಿ 8 ಸಾವಿರ ಮಕ್ಕಳನ್ನು ಓದಿಸಿ, ಈ ಪೈಕಿ 51 ಮಂದಿ ವೈದ್ಯ ಪದವೀಧರರು, 1880 ಮಂದಿ ಇಂಜಿನಿಯರ್ಸ್ ಆದ ಬಗ್ಗೆ ಬರೆದ ಮೇಲೆ, ಅವರ ಕೆಲಸದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿತು. ಹೇಗೆ ನೆರವು ನೀಡ್ತಾರೆ? ಮಕ್ಕಳನ್ನು ಹೇಗೆ ಸೆಲೆಕ್ಟ್ ಮಾಡ್ತಾರೆ ? ಕಾಲೇಜ್ಗಳಿಂದ ಹೇಗೆ ಸೀಟ್ ಕೊಡಿಸ್ತಾರೆ ? ಆರಂಭದಲ್ಲಿ ಅವರು ಎದುರಿಸಿದ ಸವಾಲುಗಳೇನು ಅನ್ನೋ ಪ್ರಶ್ನೆ ಮೂಡಿತು. ಇದಕ್ಕೆಲ್ಲ ನಟ ಸೂರ್ಯ ಅವರೇ ವಿವರಣೆ ಕೊಟ್ಟಿದ್ದಾರೆ.
ಓವರ್ ಟು ಸೂರ್ಯ : ‘ಫೌಂಡೇಷನ್ ಆರಂಭಿಸಿದಾಗ 100 ಮಕ್ಕಳನ್ನು ಓದಿಸಬೇಕೆಂಬುದು ನಮ್ಮ ಗುರಿಯಾಗಿತ್ತು. ಆದ್ರೆ, ಸಾವಿರಾರು ಅರ್ಜಿಗಳು ಬಂದವು. ಅವರೆಲ್ಲರನ್ನೂ ಸೆಲೆಕ್ಟ್ ಮಾಡುವುದೇ ದೊಡ್ಡ ಸವಾಲಾಗಿತ್ತು. ಅವರ ಊರು ಯಾವುದು ? ಅವರ ಆರ್ಥಿಕ ಸ್ಥಿತಿ, ಅಪ್ಪ, ಅಮ್ಮ ಇದ್ದಾರಾ ? ಎಷ್ಟು ಮಾರ್ಕ್ಸ್ ಗಳಿಸಿದ್ದಾರೆ ? ಅವರ ಆಸೆ, ಭವಿಷ್ಯದ ಕನಸು ಏನು ಎಂಬುದನ್ನೆಲ್ಲ ಅರಿತು, ಅಂಥ ಬಡ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಕಾಲೇಜಿಗೆ ಸೇರಿಸಬೇಕಿತ್ತು. ತಂದೆ, ತಾಯಿ ಇಲ್ಲದ ಮಕ್ಕಳು, ತಾಯಿ ಇಲ್ಲದ ಕುಡುಕ ಅಪ್ಪ, ಕೂಲಿ ಮಾಡುತ್ತಾ ಓದುತ್ತಿದ್ದವರು, ಊಟಕ್ಕೂ ಪರದಾಡುತ್ತಿದ್ದವರು, ಫೀಸ್ ಕಟ್ಟಲಾಗದೇ ಕಾಲೇಜ್ ಬಿಟ್ಟವರು, ಯಾವ ಕಾಲೇಜ್ ಸೇರಬೇಕೆಂಬುದು ತಿಳಿಯದೇ ಅಸಹಾಯಕರು.. ಹೀಗೆ ನಾನಾ ಸಮಸ್ಯೆಯ ಸುಳಿಯಲ್ಲಿದ್ದವರನ್ನು ಸೆಲೆಕ್ಟ್ ಮಾಡಿದವು.
ಆರಂಭದಲ್ಲಿ ಪ್ರಮುಖ ಕಾಲೇಜುಗಳನ್ನು ಸಂಪರ್ಕಿಸಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟು ಕೊಡುವಂತೆ ಮನವಿ ಮಾಡಿದೆವು. ನಮ್ಮ ಉದ್ದೇಶ ಅರಿತ ಕಾಲೇಜುಗಳು 1, 2 ಸೀಟ್ ಕೊಡಲು ಶುರು ಮಾಡಿ ಈಗ ವರ್ಷಕ್ಕೆ 700 ಸೀಟ್ ಕೊಡುತ್ತಿವೆ. ಹೀಗೆ, ಸೀಟ್ ಪಡೆದ ಹಳ್ಳಿಗಳ ಕಡುಬಡ ವಿದ್ಯಾರ್ಥಿಗಳು, ಕಾಲೇಜಿಗೆ ಹೋಗಲು ಶುರು ಮಾಡಿದ ಮೇಲೆ ಒಂದೊಂದೇ ಸಮಸ್ಯೆ ಎದುರಾಯ್ತು.
ತಮಿಳಿನಲ್ಲೇ ಓದಿದ್ದ ಬಹುತೇಕ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ದೊಡ್ಡ ಸಮಸ್ಯೆಯಾಯ್ತು, ಕೀಳಿರಿಮೆ ಬೆಳೆಯಿತು. ಕಲ್ಚರಲ್ ಶಾಕ್ಗೆ ಸಿಲುಕಿ ಊರಿಗೆ ಓಡುವ ನಿರ್ಧಾರಕ್ಕೆ ಬಂದಿದ್ದರು. ಓದಿನಲ್ಲಿ ಮಂಕಾಗತೊಡಗಿದರು. ಕೆಲವರು ನನ್ನಿಂದ ಓದಲಾಗದು ಎಂಬ ನಿರಾಸೆಗೆ ಸಿಲುಕಿ ಆತ್ಮಹತ್ಯೆಯ ಯೋಚನೆಗೆ ಬಿದ್ದರು. ಇದು ನನ್ನನ್ನು ಭಯಭೀತಗೊಳಿಸಿತು. ತಕ್ಷಣವೇ ಮನೋವೈದ್ಯರು, ಇಂಗ್ಲೀಷ್ ಟ್ರೈನಿಂಗ್ ನೀಡುವವರ ತಂಡ ನೇಮಿಸಿದೆ. ಮಕ್ಕಳಲ್ಲಿ ಮನೋಸ್ಥೈರ್ಯ ಹೆಚ್ಚಿಸಿ, ಗುರಿ ಮುಟ್ಟುವ ಛಲ ತುಂಬಿದೆವು. ವರ್ಷಗಟ್ಟಲೆ ಅಣ್ಣ, ಅಕ್ಕನಾಗಿ ಮಕ್ಕಳ ಬೆನ್ನಿಗೆ ನಿಂತು, ಅವರನ್ನು ಗೆಲುವಿನ ಹಾದಿಗೆ ತಂದು ನಿಲ್ಲಿಸಿದೆವು. ಅರ್ಧದಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸದಂತೆ ಎಚ್ಚರಿಕೆ ವಹಿಸಿದೆವು. ನೆರವು ಪಡೆದ ಪ್ರತಿ ಮಕ್ಕಳು, ತಾವು ಕಂಡ ಕನಸು ನನಸು ಮಾಡಿಕೊಂಡರು. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತರು. ಇಂಗ್ಲೀಷ್ ಕಲಿತರು, ದೊಡ್ಡ ದೊಡ್ಡ ಕಾಲೇಜುಗಳಲ್ಲಿ ಆತ್ಮವಿಶ್ವಾಸದಿಂದ ಓದು ಮುಗಿಸಿದರು. ನಾನು ಮಾಡಿದ ಸಹಾಯ ದೊಡ್ಡದಲ್ಲ. ಆದ್ರೆ, ಎಲ್ಲ ಕೊರತೆಗಳ ನಡುವೆ, ಓದಲೇ ಬೇಕು, ಉನ್ನತ ಸ್ಥಾನಕ್ಕೆ ಏರಲೇ ಬೇಕೆಂಬ ಹಠದಿಂದ ಓದಿ ತಮ್ಮ ಭವಿಷ್ಯ ಕಟ್ಟಿಕೊಂಡಿದ್ದು ಅವರ ದೊಡ್ಡ ಸಾಧನೆ..
ಹೀಗೆಂದು ಮಾತು ಮುಗಿಸಿದರು ಸೂರ್ಯ.
ಒಬ್ಬ ನಟನಾಗಿ ತಾನು, ತನ್ನ ಕುಟುಂಬ ಎಂದಷ್ಟೇ ಯೋಚಿಸದೇ ಸಾಮಾಜಿಕ ಜವಾಬ್ದಾರಿ ಅರಿತು ಸಾವಿರಾರು ಕಡುಬಡ ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಓದಿಸುವ ಮೂಲಕ ನಟ ಸೂರ್ಯ ವಿದ್ಯಾ ಕ್ರಾಂತಿಯನ್ನೇ ಮಾಡಿದ್ದಾರೆ.
ಎಂಜಿನಿಯರಿಂಗ್, ಮೆಡಿಕಲ್ ಕಾಲೇಜ್ ನಡೆಸ್ತಿರೋ ನಮ್ಮ ರಾಜಕಾರಣಿಗಳಿಗೆ, ಕೋಟಿಗಟ್ಟಲೇ ಸಂಭಾವನೆ ಪಡೆಯುವ ಸ್ಟಾರ್ ನಟರಿಗೆ ಇಂಥದ್ದೊಂದು ಸಾಮಾಜಿಕ ಜವಾಬ್ದಾರಿ ಬಂದುಬಿಟ್ಟರೆ ? ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳ ಮಕ್ಕಳ ಭವಿಷ್ಯ ಬೆಳಗಿ ಬಿಟ್ಟೀತು.
ಈ ನೆಲ ಸೂರ್ಯನಂಥವರಿಗಾಗಿ ಕಾಯುತ್ತಿದೆ..!
#ಶೋಭಾಮಳವಳ್ಳಿ