15/03/2018
ಕುಮಾರ್ ಬುರಡಿಕಟ್ಟಿಯವರು ಅಡುಗೆ ಎಣ್ಣೆ ಕುರಿತು ಬರೆದ ಬರಹ -..........................................................
ನಾವು ಎಣ್ಣೆ ಬಿಟ್ಟು ಇವತ್ತಿಗೆ ಒಂದು ತಿಂಗಳಾಯಿತು. ಎಣ್ಣೆ ಅಂದ್ರೆ ಅಡುಗೆಗೆ ಬಳಸುವ ಎಣ್ಣೆ ಕಣ್ರಿ.
ಆವತ್ತು ಗೀತಾ ಸ್ಪರ್ಧಾತ್ಮಕ ಪರೀಕ್ಷೆಯೊಂದಕ್ಕೆ ಹೋಗಿದ್ದಳು. ಮನೆಯಲ್ಲಿ ಅತ್ತೆಯೂ ಇರಲಿಲ್ಲ. ಗುಂಡನನ್ನು ಬೆಳಿಗ್ಗೆಯಿಂದ ಸಂಜೆ ತನಕ ನೋಡಿಕೊಳ್ಳುವ ಜವಾಬ್ದಾರಿ ನಂದು. ಒಂದಿಷ್ಟು ಆಟ ಆಡಿದೆವು, ಒಂದಿಷ್ಟು ಕೆಲಸಾನೂ ಮಾಡೋಣ ಅಂದುಕೊಂಡು ಅಡುಗೆಮನೆಯ ಮೂಲೆಯಲ್ಲಿ ಬಿದ್ದಿದ್ದ ಖಾಲಿ ಅಡುಗೆ ಎಣ್ಣೆಯ ಪ್ಲಾಸ್ಟಿಕ್ ಡಬ್ಬಗಳನ್ನು ಕೈಗೆತ್ತಿಕೊಂಡೆ. ಅವುಗಳ ಮೇಲುಭಾಗವನ್ನು ಕತ್ತರಿಸಿ ಓಪನ್ ಡಬ್ಬ ರೀತಿ ಮಾಡಿ, ಒಳಗೆ-ಹೊರಗೆ ಕ್ಲೀನ್ ಮಾಡಿ, ಅದಕ್ಕೆ ಮಣ್ಣುಹಾಕಿ ಒಂದಿಷ್ಟು ಸಸಿ ನೆಡೋಣ ಎಂಬುದು ಯೋಜನೆ. ಮೇಲುಭಾಗವನ್ನು ಕತ್ತರಿಸಿ ತೊಳೆಯುವುದಕ್ಕೆ ಹೋದಾಗ ಅಚ್ಚರಿಯೊಂದು ಕಾದಿತ್ತು. ಒಳಗೆ ಚೀವಿಂಗ್ ಗಮ್ ರೀತಿಯ ಅಂಟು ಪದಾರ್ಥ ಡಬ್ಬಗಳ ಒಳಗೋಡೆಗೆ ದಪ್ಪನಾಗಿ ಅಂಟಿಕೊಂಡಿತ್ತು. ಮೂರ್ನಾಲ್ಕು ಬ್ರಾಂಡ್ ಎಣ್ಣೆಯ ಡಬ್ಬಗಳಿದ್ದವು. ಎಲ್ಲದರಲ್ಲೂ ಈ ಅಂಟು ದ್ರವ್ಯ ಮೆತ್ತಿಕೊಂಡಿತ್ತು. ಎಷ್ಟು ಅಸಹ್ಯವಾಗಿತ್ತೆಂದರೆ ಮತ್ತು ಎಷ್ಟು ರಿಜಿಡ್ ಆಗಿತ್ತೆಂದರೆ ಬಹಳ ಕಷ್ಟಪಟ್ಟರೂ ಅದನ್ನು ತೆಗೆಯಲಾಗಲಿಲ್ಲ. ಪಕ್ಕಾ ಚೀವಿಂಗ್ ಗಮ್ ತಿಂದ ಮೇಲೆ ಉಳಿಯುತ್ತಲ್ಲ, ಹಾಗಿತ್ತು. ತೊಳೆಯುವಾಗ ಬಾತ್ ರೂಮಿನಲ್ಲಿ ಬಿದ್ದ ಆ ಅಂಟು ಎಷ್ಟು ತೊಳೆದರೂ ಹೋಗಲಿಲ್ಲ. ಒಂದು ವಾರದ ತನಕ ಕಾಲಿಟ್ಟರೆ ಅಂಟಿಕೊಳ್ಳುತ್ತಿತ್ತು. ಇಲ್ಲಿ ಯಾವ ಕಂಪನಿಯ, ಬ್ರ್ಯಾಂಡಿನ ಎಣ್ಣೆ ಎಂಬುದು ಮುಖ್ಯವಲ್ಲ. ಎಲ್ಲಾ ಬ್ರ್ಯಾಂಡಿನ ಎಣ್ಣೆಯದ್ದೂ ಇದೇ ಕತೆ.
ಮುಂದೆ ಹೋಗುವ ಮುನ್ನ ಒಂದು ಸರಳ ಅಂಕಗಣಿತವನ್ನು ನೋಡೋಣ. ಒಂದು ಲೀಟರ್ ಶೇಂಗಾ ಎಣ್ಣೆ ತೆಗೆಯೋಕೆ ಏನಿಲ್ಲವೆಂದರೂ ಮೂರು ಕೇಜಿ ಶೇಂಗಾ ಕಾಳು ಬೇಕಾಗುತ್ತದೆಯಂತೆ. ಒಂದು ಕೇಜಿಗೆ 80 ರೂಪಾಯಿಯಂತೆ ಲೆಕ್ಕ ಹಾಕಿದರೆ ಮೂರು ಕೇಜಿಗೆ 240 ರೂಪಾಯಿ. ಅದರ ಪ್ರೊಸೆಸಿಂಗ್, ಮಾರ್ಕೆಟಿಂಗ್, ಸಾಗಾಣಿಕೆ, ಲಾಭದ ಮಾರ್ಜಿನ್ ಎಲ್ಲ ಲೆಕ್ಕಾ ಹಾಕಿದರೆ ಒಂದು ಕೇಜಿ ಎಣ್ಣೆಯನ್ನು ತಯಾರಿಸಿ ನಮ್ಮ ಓಣಿಯ ಅಂಗಡಿಗೆ ತಲುಪಿಸಬೇಕಾದರೆ ಕನಿಷ್ಠ 300 ರೂಪಾಯಿ ಖರ್ಚು ತಗಲುತ್ತದೆ. ಅದಕ್ಕಿಂತ ಕಡಿಮೆಗೆ ಮಾರುವ ಪ್ರಮೇಯವೇ ಬರುವುದಿಲ್ಲ. ಆದರೆ ಮಾರ್ಕೇಟಿನಲ್ಲಿ ಒಂದು ಲೀಟರ್ ಶೇಂಗಾ ಎಣ್ಣೆ ನಮಗೆ 80 ರೂಪಾಯಿಗೆ ಸಿಗುತ್ತದೆ...!!! 220 ರೂಪಾಯಿ ಲಾಸ್ ಮಾಡಿಕೊಂಡು ನಮಗೆ ಬರೀ 80 ರೂಪಾಯಿಗೆ ಮಾರೋಕೆ ಎಣ್ಣೆ ಬ್ಯುಸಿನೆಸ್ ಮಾಡೋರಿಗೆ ಹುಚ್ಚು ಹಿಡಿದಿದೆಯಾ? ಇಲ್ಲ... ಅಷ್ಟು ಕಡಿಮೆ ಬೆಲೆಗೆ ಶುದ್ಧ ಶೇಂಗಾ ಎಣ್ಣೆ ಮಾರುವುದಕ್ಕೆ ಸಾಧ್ಯವೇ ಇಲ್ಲ. ಆದರೂ ಮಾರುತ್ತಿದ್ದಾರೆಂದರೆ ಅದು ಶುದ್ಧ ಎಣ್ಣೆ ಅಲ್ಲ. ಅದರಲ್ಲಿ ನೈಜ ಶೇಂಗಾ ಎಣ್ಣೆ ಇರೋದು ಕಾಲುಭಾಗಕ್ಕಿಂತ ಕಡಿಮೆ. ಉಳಿದದ್ದೆಲ್ಲಾ ಕಲಬೆರಕೆ. ಅದಕ್ಕೆ ಹೇವರಿಕೆ ಹುಟ್ಟಿಸುವ ಈ ಅಂಟು ಪದಾರ್ಥವನ್ನು ಬೆರೆಸುತ್ತಾರಂತೆ. (ಅದರ ಹೆಸರನ್ನು ಮರೆತಿರುವೆ. ಯಾರಿಗಾದರೂ ಗೊತ್ತಾದರೆ ಹೇಳಿ). ಇದು ಕೇವಲ ಶೆಂಗಾ ಎಣ್ಣೆಗೆಮಾತ್ರ ಸೀಮಿತವಾದ ಲೆಕ್ಕಾಚಾರ ಅಲ್ಲ. ಸೂರ್ಯಕಾಂತಿ ಎಣ್ಣೆಯನ್ನೂ ಒಳಗೊಂಡತೆ ಎಲ್ಲಾ ಅಡುಗೆ ಎಣ್ಣೆಗೂ ಅನ್ವಯಿಸುವ ಸರಳ ಅಂಕಗಣಿತ.
ನನಗೆ ಮೊದಲೇ ಇದರ ಬಗ್ಗೆ ಒಂದಿಷ್ಟು ಗೊತ್ತಿತ್ತಾದರೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ತಿಂಗಳ ಹಿಂದೆ ಖಾಲಿ ಎಣ್ಣೆ ಡಬ್ಬಾಗಳನ್ನು ತೊಳೆಯುವುದಕ್ಕೆ ಹೋದಾಗಲೇ ಅದರ ದಿಗ್ದರ್ಶನವಾಗಿದ್ದು.
ಈ ಅಂಟು ಏನು ಮಾಡುತ್ತದೆ? ಆರು ತಿಂಗಳ ಹಿಂದೆ ನೋಡಿದ್ದ ಒಬ್ಬ ಪ್ರಖ್ಯಾತ ಹೃದಯ ತಜ್ಞ Bimal Chhajer ಅವರ ವೀಡಿಯೋ ನೆನಪಾಯಿತು. ಅವರ ಮಾತು ಬಹಳ ಸ್ಪಷ್ಟವಾಗಿತ್ತು, ಸರಳವಾಗಿತ್ತು. ಅದರ ಸಾರಾಂಶ ಹೀಗಿದೆ:
“ನಮ್ಮ ಅಡುಗೆ ಮನೆಯ ಗೋಡೆಗಳೆಲ್ಲಾ ಅಂಟು ಅಂಟಾಗಿರುತ್ತವೆ. ಬಹಳ ದಿನ ಹಾಗೇ ಬಿಟ್ಟರೆ ಅದನ್ನು ತೊಳೆದು ಕ್ಲೀನ್ ಮಾಡುವುದಕ್ಕೂ ಆಗದಷ್ಟುಅಂಟು ಮೆತ್ತಿಕೊಂಡುಬಿಟ್ಟಿರುತ್ತದೆ. ಅಡುಗೆ ಮನೆಯಲ್ಲಿ ಬಹಳ ದಿನ ಉಪಯೋಗಿಸದೇ ಹಾಗೇ ಇಟ್ಟ ವಸ್ತುಗಳ ಕತೆಯೂ ಇದೇ ಆಗಿರುತ್ತದೆ. ಇಷ್ಟಕ್ಕೆಲ್ಲಾ ಕಾರಣ ಅಡುಗೆಗೆ ಬಳಸುವ ಎಣ್ಣೆಯಲ್ಲಿ ಮಿಶ್ರಿತವಾಗಿರುವ ಈ ಅಂಟು ಪದಾರ್ಥ. ನಾವು ಎಣ್ಣೆ ಹಾಕಿ ಒಗ್ಗರಣೆ ಮಾಡುವಾಗ ಈ ಪದಾರ್ಥದ ಒಂದು ಸಣ್ಣಭಾಗ ಆವಿಯಾಗಿ ಗೋಡೆಗೆ ಅಂಟಿಕೊಂಡರೆ ಉಳಿದದ್ದೆಲ್ಲಾ ನಮ್ಮ ದೇಹದೊಳಗೆ ಹೋಗುತ್ತದೆ. ಆವಿಯಾದ ಸ್ವಲ್ಪ ಭಾಗವೇ ಗೋಡೆಗೆ ಇಷ್ಟೊಂದು ಹಾನಿ ಮಾಡಿದರೆ ದೇಹದೊಳಗೆ ಹೋದ ಬಹುಪಾಲು ಅಂಟು ಪದಾರ್ಥ ದೇಹಕ್ಕೆ ಇನ್ನೆಂಥಾ ಸಮಸ್ಯೆ ಮಾಡಬಹುದೆಂದು ಯೋಚಿಸಿ.
ದೇಹದ ಯಾವುದೇ ಅಂಗ ಕಾರ್ಯನಿರ್ವಹಿಸಬೇಕಾದರೆ ಅದಕ್ಕೆ ಶುದ್ಧ ರಕ್ತ ಅತ್ಯಗತ್ಯ. ದೇಹದ ಮೂಲೆ ಮೂಲೆಗಳಿಂದ ಅಶುದ್ಧ ರಕ್ತ ನೀಲಿ ನಾಳಗಳ ಮೂಲಕ ಹೃದಯವನ್ನು ಸೇರುತ್ತದೆ. ಅಶುದ್ಧ ರಕ್ತವನ್ನು ಶುದ್ಧೀಕರಿಸಿ, ಆಮ್ಲಜನಕ ಸೇರಿಸಿ ದೇಹದ ಎಲ್ಲಾ ಭಾಗಗಳಿಗೂ ಪಂಪ್ ಮಾಡುವ ಕೆಲಸ ಹೃದಯದ್ದು. ಅದನ್ನು ಸಾಗಿಸುವ ಕೆಲಸ ಕೆಂಪು ರಕ್ತನಾಳಗಳದ್ದು. ಹೃದಯವೂ ಕೂಡ ಸ್ನಾಯುಗಳಿಂದ ಮಾಡಲ್ಪಟ್ಟ ಒಂದು ಅಂಗವಾಗಿದ್ದರಿಂದ ಅದೂ ಕಾರ್ಯನಿರ್ವಹಿಸಬೇಕೆಂದರೆ ಅದಕ್ಕೂ ಶುದ್ಧ ರಕ್ತಬೇಕು. ಹಾಗಾಗಿ, ದೇಹದ ಇತರ ಭಾಗಗಳಿಗೆ ಹೇಗೆ ರಕ್ತನಾಳಗಳ ಮೂಲಕ ಶುದ್ಧ ರಕ್ತ ಹರಿಯುತ್ತದೆಯೋ ಅದೇ ರೀತಿಯಲ್ಲಿ ಹೃದಯ ಸ್ನಾಯುಗಳಿಗೂ ಒಂದಿಷ್ಟು ರಕ್ತ ಹರಿಯುತ್ತದೆ. ಅದಕ್ಕಾಗಿ ಚಿಕ್ಕಚಿಕ್ಕ ನಾಳಗಳಿರುತ್ತವೆ. ನಮ್ಮ ಅಡುಗೆ ಎಣ್ಣೆಯಲ್ಲಿ ಕಲಬೆರಕೆಯಾಗಿ ಸೇರಿಕೊಂಡಿರುವ ಈ ಅಂಟು ಪದಾರ್ಥ ಹೇಗೆ ಅಡುಗೆಮನೆಯ ಗೋಡೆಗೆ ಅಂಟಿಕೊಳ್ಳುತ್ತದೆಯೋ ಅದೇ ರೀತಿ ಹೃದಯ ಸ್ನಾಯುಗಳಿಗೆ ರಕ್ತವನ್ನು ಕೊಂಡೊಯ್ಯುವ ಈ ನಾಳಗಳ ಒಳಗೂ ಅಂಟಿಕೊಂಡು ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ನಾಳಗಳಲ್ಲಿ ಅದು ಕಟ್ಟಿಕೊಂಡರೆ (ಬ್ಲಾಕ್ ಆದರೆ) ಹೃದಯ ಸ್ನಾಯುಗಳಿಗೆ ಶುದ್ಧರಕ್ತವೇ ಹರಿಯುವುದಿಲ್ಲ. ಆಗ ಕಾರ್ಯನಿರ್ವಹಿಸಲು ಶಕ್ತಿಯೇ ಇಲ್ಲದಂತಾಗಿ ಹೃದಯ ಕೆಲಸ ನಿಲ್ಲಿಸಿಬಿಡುತ್ತದೆ. ಹೃದಯಾಘಾತ.
ಮತ್ತೆ ಇಷ್ಟೊಂದು ಎಣ್ಣೆ ಪದಾರ್ಥ ತಿಂತೀವಿ. ಆದ್ರೂ ಯಾಕೆ ಹೃದಯಾಘಾತ ಆಗೋದಿಲ್ಲ ಎಂದರೆ ಈ ರಕ್ತನಾಳಗಳ ಒಳಗೆ ಕಟ್ಟಿಕೊಳ್ಳುವ ಅಂಟನ್ನು ಈ ನಾಳಗಳೇ ಕ್ಷಣಕ್ಷಣಕ್ಕೂ ಕಷ್ಟಪಟ್ಟು ಕ್ಲೀನ್ ಮಾಡುತ್ತಿರುತ್ತವೆ. ಅದಕ್ಕೂ ಒಂದು ಮಿತಿ ಇರುತ್ತದೆ. ಅಂಟು ಜಾಸ್ತಿ ಆದರೆ ಅವುಗಳಿಗೂ ಕ್ಲೀನ್ ಮಾಡೋಕೆ ಆಗಲ್ಲ.”
ಈಗ ನನ್ನ ಖಾಲಿ ಎಣ್ಣೆ ಡಬ್ಬಳ ವಿಷಯಕ್ಕೆ ಬರೋಣ. ಇಷ್ಟೆಲ್ಲಾ ಗೊತ್ತಾದ ಮೇಲೂ, ಅದರಲ್ಲೂ ನಾನೇ ಖುದ್ದಾಗಿ ಆ ಅಂಟು ಪದಾರ್ಥವನ್ನು ನೋಡಿದ ಮೇಲೂ ಮತ್ತೆ ಆ ಎಣ್ಣೆಯನ್ನು ತಿನ್ನೋದಕ್ಕೆ ಮನಸ್ಸು ಸುತಾರಾಂ ಒಪ್ಪಲಿಲ್ಲ. ಒಂದು ರೀತಿಯ ವಾಕರಿಕೆ ಬರುತ್ತಿತ್ತು. ಆವತ್ತೇ ತೀರ್ಮಾನ ಮಾಡಿದೆ ಎಣ್ಣೆಯನ್ನು ಬಿಟ್ಟುಬಿಡೋಣ ಅಂತ...!
ಹಾಗಿದ್ದರೆ ಊಟ ತಯಾರು ಮಾಡೋದು ಹೇಗೆ? ಒಗ್ಗರಣೆ ಹಾಕೋದು ಹೇಗೆ? ದೇಹಕ್ಕೆ ಅಗತ್ಯವಿರುವ ಕೊಬ್ಬಿನಾಂಶ ಎಲ್ಲಿಂದ ಬರುತ್ತದೆ? ಹೀಗೆ ಹತ್ತಾರು ಪ್ರಶ್ನೆಗಳು ಬಂದವು. ಅದಕ್ಕೂ ಉತ್ತರವನ್ನು ಮೇಲೆ ಹೇಳಿದ ಹೃದಯ ತಜ್ಞರೇ ಕೊಟ್ಟಿದ್ದರು.
ಅಸಲಿಗೆ ಅಡುಗೆಯ ರುಚಿ ನಿರ್ಧಾರವಾಗುವುದು ಎಣ್ಣೆಯಿಂದಲ್ಲ, ಬದಲಿಗೆ ಮಸಾಲೆಯಿಂದ. ರುಚಿಗೆ ಎಣ್ಣೆಯೇ ಕಾರಣ ಎಂದು ನೀವು ನಂಬುವುದಾದರೆ ಒಂದು ಚಮಚ ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು ನೋಡಿ, ಗೊತ್ತಾಗುತ್ತೆ. ಅಡುಗೆಯ ರುಚಿ ಪ್ರಧಾನವಾಗಿ ನಿರ್ಧಾರವಾಗುವುದು ಎಣ್ಣೆಯಿಂದಲ್ಲ, ಮಸಾಲೆಯಿಂದ. ಉಪ್ಪು, ಖಾರ, ಹುಳಿ – ಇತ್ಯಾದಿಗಳನ್ನು ಬಳಸಿ, ಆದರೆ ಎಣ್ಣೆಯನ್ನು ಬಿಡಿ ಎಂಬುದು ಆ ವೈದ್ಯರ ಸಲಹೆ. ನಾನು ಅದನ್ನು ಯಥಾವತ್ತಾಗಿ ಪಾಲಿಸಲಿಲ್ಲ. ಅದನ್ನು ಸ್ವಲ್ಪ ಮಾಡಿಫೈ ಮಾಡಿಕೊಳ್ಳಲು ನಿರ್ಧರಿಸಿದೆ. (ವಾಸ್ತವದಲ್ಲಿ ತುಪ್ಪವೂ ಕೂಡ ಕೊಲೆಸ್ಟ್ರಾಲ್ ಪದಾರ್ಥವಾಗಿದ್ದರಿಂದ ಅದನ್ನೂ ದೂರವಿಡಬೇಕು. ಆದರೆ, ಒಂದೇ ಸಾರಿಗೆ ಎಲ್ಲಾ ಬಿಡೋದು ಕಷ್ಟ ಎಂಬ ಕಾರಣಕ್ಕೆ ಈ ಮಾರ್ಪಾಡು. ಭವಿಷ್ಯದಲ್ಲಿ ಎಣ್ಣೆ, ತುಪ್ಪ ಎರಡನ್ನೂ ಬಿಡುವ ಬಗ್ಗೆ ಪ್ರಯತ್ನಿಸಬಹುದು)
ಸಂಜೆ ಗೀತಾ ಮನೆಗೆ ಬಂದ ಮೇಲೆ ಖಾಲಿ ಎಣ್ಣೆ ಡಬ್ಬದೊಳಗಿನ ಅಂಟು ಪದಾರ್ಥದ ಬಗ್ಗೆ, ಎಣ್ಣೆಯ ಉತ್ಪಾದನೆ-ಕಲಬೆರಕೆಯ ಸರಳ ಅಂಕಗಣಿತದ ಬಗ್ಗೆ ವಿವರಿಸಿದೆ. ಅದೆಲ್ಲಾ ಆಕೆಗೂ ಗೊತ್ತಿತ್ತು. ಆದರೆ, ಪರ್ಯಾಯ ಏನು ಎಂಬುದೇ ಪ್ರಶ್ನೆಯಾಗಿತ್ತು. ಇಬ್ಬರೂ ಕೂತು ಒಂದು ತೀರ್ಮಾನ ಮಾಡಿದೆವು. ಎಣ್ಣೆಯ ಬದಲಿಗೆ ಒಂದಿಷ್ಟು ತುಪ್ಪ ಬಳಸಿದರಾಯಿತು ಎಂಬ ತೀರ್ಮಾನಕ್ಕೆ ಬಂದೆವು. ಅಂಗಡಿಯಿಂದ ತಂದ ತುಪ್ಪದಲ್ಲಿ ಏನೇನು ಕಲಬೆರಕೆ ಮಾಡಿರುತ್ತಾರೋ ಏನೋ ಎಂಬ ಸಂಶಯದಿಂದ ಮನೆಯಲ್ಲೇ ಮಾಡಿದ ತುಪ್ಪವನ್ನು ಬಳಸುವುದಕ್ಕೆ ನಿರ್ಧರಿಸಿದೆವು. ಅಂತೆಯೇ ಪ್ರಯೋಗ ಪ್ರಾರಂಭಿಸಿಯೇ ಬಿಟ್ಟೆವು.
ದಿನವೊಂದಕ್ಕೆ ಒಂದು ಲೀಟರ್ ಫುಲ್ ಕ್ರೀಮ್ ನಂದಿನಿ ಹಾಲು ತಂದು, ಚೆನ್ನಾಗಿ ಕಾಯಿಸಿ, ಆರಿಸಿ, ಫ್ರಿಡ್ಜಿನಲ್ಲಿಟ್ಟರೆ ಮರುದಿನ ಬೆಳಿಗ್ಗೆ ಹೊತ್ತಿಗೆ ಬೇಕಾದಷ್ಟು ಕೆನೆಗಟ್ಟಿರುತ್ತದೆ. ಅದನ್ನು ಶೇಖರಿಸಿ ಫ್ರಿಡ್ಜಿನಲ್ಲೇ ಇಟ್ಟು ಐದಾರು ದಿನಕ್ಕೊಮ್ಮೆ ಹೆಪ್ಪು ಹಾಕಿ, ಕಡೆದರೆ ಮೂರ್ನಾಲ್ಕು ಮಂದಿ ಇರುವ ಕುಟುಂಬಕ್ಕೆ ಸಾಕಾಗುವಷ್ಟು ಬೆಣ್ಣೆ ತುಪ್ಪ ಸಿಗುತ್ತದೆ. ಅಂಗಡಿಯಿಂದ ಕಲಬೆರಕೆ ಎಣ್ಣೆ ತರೋದೂ ಬೇಡ, ಕಲಬೆರಕೆ ತುಪ್ಪ ತರೋದೂ ಬೇಡ. ಮನೆಗೆ ಯಾರಾದರೂ ಆಕಳು ಅಥವಾ ಎಮ್ಮೆಯ ಹಾಲನ್ನು ಸಪ್ಲೆ ಮಾಡುವ ವ್ಯವಸ್ಥೆ ಇದ್ದರೆ ಅದು ಇನ್ನೂ ಒಳ್ಳೆಯದು. ಇಲ್ಲದಿದ್ದರೆ ನಂದಿನಿ ಹಾಲೇ ಸಾಕಾಗುತ್ತದೆ. ಕಾಫಿ, ಟಿ, ಮೊಸರು, ಮಜ್ಜಿಗೆಗಳಿಗೆ ಹಾಲೂ ಆಗುತ್ತೆ. ಒಗ್ಗರಣೆಗೆ ತುಪ್ಪವೂ ಆಗುತ್ತೆ.
ಇವತ್ತಿಗೆ ಒಂದು ತಿಂಗಳಾಯಿತು. ಅಡುಗೆಗಾಗಿ ಒಂದು ಹನಿ ಎಣ್ಣೆ ಬಳಸಿಲ್ಲ. ಉಪ್ಪಿಟ್ಟು ಮಾಡಿದ್ದೇವೆ, ಅವಲಕ್ಕಿ ಹಚ್ಚಿದ್ದೇವೆ, ಸಾಂಬಾರು ಮಾಡಿದ್ದೇವೆ, ದೋಸೆ ಮಾಡಿದ್ದೇವೆ, ಚಟ್ನಿ ಮಾಡಿದ್ದೇವೆ. ಹೀಗೆ ಬಹುತೇಕ ಎಲ್ಲಾ ರೀತಿ ಅಡುಗೆ ಮಾಡಿದ್ದೇವೆ. ಯಾವುದಕ್ಕೂ ಒಂದು ಹನಿ ಎಣ್ಣೆ ಬಳಸಿಲ್ಲ. ರುಚಿಯಲ್ಲಿ ಕಳಪೆಯೇನೂ ನಮಗೆ ಕಂಡಿಲ್ಲ. ಒಂದು ರೀತಿಯಲ್ಲಿ ಎಣ್ಣೆಯ ಅಡುಗೆಗಿಂತ ತುಪ್ಪದ ಅಡುಗೆಯೇ ಹೆಚ್ಚು ರುಚಿಕರವಾಗಿದೆ. ನಾನು ಮನೆಯಿಂದ ಹೊರಗೆ ಸ್ನೇಹಿತರ ಮನೆಯಲ್ಲಿ ಅಥವಾ ಹೊಟೇಲಿನಲ್ಲಿ ಉಣ್ಣುವ ಅನಿವಾರ್ಯತೆ ಬಂದಾಗ ಅಲ್ಲೂ ತುಪ್ಪದ ಅಡುಗೆಯೇ ಬೇಕು ಅಂತ ಕೇಳೋಕೆ ಆಗಲ್ಲ. ಅಂತಹ ಸಂದರ್ಭದಲ್ಲಿ ಎಣ್ಣೆಯ ಅಡುಗೆ ಉಂಡಿದ್ದುಂಟು. ಕಳೆದೊಂದು ತಿಂಗಳಲ್ಲಿ ನಾಲ್ಕಾರು ಬಾರಿ. ಅದನ್ನು ಬಿಟ್ಟರೆ ಮನೆಯಲ್ಲಿ ಅಡುಗೆ ಮಾಡಿಲ್ಲ; ಉಂಡಿಲ್ಲ!
ಆರು ತಿಂಗಳ ಹಿಂದೆ ಬಿಳಿ ಅಕ್ಕಿ, ಗೋಧಿ ಆಧಾರಿತವಾಗಿದ್ದ ನನ್ನ ಪ್ರಧಾನ ಆಹಾರವನ್ನು ಸಿರಿಧಾನ್ಯಕ್ಕೆ ವರ್ಗಾಯಿದ್ದೆ. ಅದು ಈಗಲೂ ಮುಂದುವರೆಯುತ್ತಿದೆ. ನವಣಕ್ಕಿ ಅನ್ನ, ಸಜ್ಜೆ-ರಾಗಿ-ಜೋಳದ ರೊಟ್ಟಿ, ಸಾಮೆಯ ದೋಸೆ ಮತ್ತು ಇಡ್ಲಿ ನಡೆಯುತ್ತಿದೆ. 75% ಸಿರಿಧಾನ್ಯ ಹಾಗೂ 25% ನೆಲ್ಲಕ್ಕಿ- ಗೋಧಿ ಊಟ ಚಾಲೂ ಇದೆ. ಅದಾದ ಮೇಲೆ ಈಗ ಎಣ್ಣೆಯ ಬದಲಿಗೆ ತುಪ್ಪ ಬಳಸುವ ಮಾರ್ಪಾಡು..!
ಒಂದು ತಿಂಗಳಾಯಿತು. ಈ ಅಭ್ಯಾಸವನ್ನು ಹೀಗೆ ಮುಂದುವರೆಸಬಹುದು ಎಂಬ ವಿಶ್ವಾಸ ಬಂದಿದ್ದರಿಂದ ಇಲ್ಲಿ ಬರೆಯುತ್ತಿರುವೆ. ನನ್ನನ್ನು ನೋಡಿ ಒಬ್ಬರಾದರೂ ಇದನ್ನು ಅಳವಡಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಇದನ್ನು ಪಬ್ಲಿಕ್ ಆಗಿ ಷೇರ್ ಮಾಡುತ್ತಿರುವೆ. ನಿಮಗೆ ಇಷ್ಟವಾದರೆ, ಕನ್ವಿನ್ಸ್ ಆದರೆ ಇದನ್ನು ಷೇರ್ ಮಾಡಿ. ಇಲ್ಲವೇ ನೀವೇ ಪ್ರಯೋಗ ಮಾಡಿ, ಸರಿ ಎನ್ನಿಸಿದರೆ ನಿಮ್ಮ ಅನುಭವ ಬರೆಯಿರಿ. ಒಳ್ಳೆಯದು ಹರಡಲಿ.
- ಕುಮಾರ್ ಬುರಡಿಕಟ್ಟಿ
(Please spread the word, share with your friends and family)
#ಸ್ಥಳೀಯ_ಜನ_ಸ್ಥಳೀಯ_ಆಹಾರ_ಸರಣಿ
#ಸಮಗ್ರ_ಸುಸ್ಥಿರ_ಕೃಷಿ_ಬದುಕು॑)