03/05/2026
ಕರುಳಿನ ತ್ಯಾಗಕ್ಕೆ “ಸಿದ್ಧರಾಮ ಸಿಂಚನ”
ದೀಪವು ತನ್ನ ಸುತ್ತಮುತ್ತಲಿನ ಕತ್ತಲನ್ನು ಓಡಿಸಿ ಬೆಳಕನ್ನು ಹರಡುತ್ತದೆ. ಮನೆಗೆ ಹೊಳಪು ಕೊಡುತ್ತದೆ, ಮಂದಿರಕ್ಕೆ ಮಂಗಳ ಕೊಡುತ್ತದೆ, ದಾರಿಗೆ ದಿಕ್ಕು ತೋರಿಸುತ್ತದೆ. ಆದರೆ ಅದೇ ದೀಪದ ಕೆಳಗೆ ಮಾತ್ರ ಕತ್ತಲು ಗಾಢವಾಗಿ ನೆಲೆಸಿರುತ್ತದೆ. ಈ ದೃಶ್ಯವನ್ನು ನೋಡಿದಾಗ ಮನಸ್ಸು ಒಂದೇ ಪ್ರಶ್ನೆ ಕೇಳುತ್ತದೆ—ಇತರರ ಬದುಕನ್ನು ಬೆಳಗಿಸುವವರ ಬದುಕಿನ ಅಡಿಯಲ್ಲಿರುವ ಕತ್ತಲನ್ನು ನೋಡುವವರು ಯಾರು?
ಈ ಪ್ರಶ್ನೆ ಕೇವಲ ತತ್ತ್ವಚಿಂತನೆಯಲ್ಲ; ಅದು ನಮ್ಮ ಸಮಾಜದ ಹೃದಯಕ್ಕೆ ಕೇಳಬೇಕಾದ ಪ್ರಶ್ನೆ. ಲೋಕಕ್ಕೆ ಮಾರ್ಗದರ್ಶನ ಮಾಡುವವರು, ಸಮಾಜಕ್ಕೆ ಸೇವೆ ಸಲ್ಲಿಸುವವರು, ಸಾವಿರಾರು ಮಂದಿಗೆ ಆಶ್ರಯವಾಗುವವರು—ಅವರ ಹಿಂದೆ ನಿಂತು ಮೌನವಾಗಿ ತ್ಯಾಗ ಮಾಡಿದವರನ್ನು ನಾವು ಎಷ್ಟು ಬಾರಿ ನೆನಪಿಸಿಕೊಳ್ಳುತ್ತೇವೆ? ವಿಶೇಷವಾಗಿ ಸನ್ಯಾಸ ಮಾರ್ಗಕ್ಕೆ ತಮ್ಮ ಮಗನನ್ನು ಸಮರ್ಪಿಸಿದ ತಂದೆತಾಯಿಗಳ ಬದುಕು ಎಷ್ಟು ಮೌನ ಕಣ್ಣೀರಿನಿಂದ ತುಂಬಿರುತ್ತದೆ ಎಂಬುದನ್ನು ಯೋಚಿಸಿದರೆ ಹೃದಯ ಕಂಪಿಸುತ್ತದೆ.
ಒಬ್ಬ ಮಗನಿಗಾಗಿ ದೇವರಿಗೆ ಹರಕೆ ಹೊತ್ತು, ಒಂಬತ್ತು ತಿಂಗಳು ಹೆತ್ತು ಹೊತ್ತು, ಸಾಕಿ ಸಲುಹಿ, ತಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡರೂ ಮಗನ ಹೊಟ್ಟೆಗೆ ಅನ್ನ ತುಂಬಿಸುವ ಪಾಲಕರು. ಮುಗಿಲಂತೆ ಪೋಷಿಸಿ, ಕಡಲಂತೆ ಪ್ರೀತಿಸಿ, ಕಡುಕಷ್ಟ ಬಂದರೂ ಎದೆಯೊಡ್ಡಿ ನಿಲ್ಲುವ ಮಾತಾಪಿತೃಗಳು. ತಮ್ಮ ಕನಸುಗಳನ್ನು ಮೌನವಾಗಿ ಸಮಾಧಿ ಮಾಡಿ, ಮಗನ ಕನಸುಗಳಿಗೆ ರೆಕ್ಕೆ ಕಟ್ಟಿ ಅದರಲ್ಲಿ ಖುಷಿಪಡುವ ಮಹಾತ್ಯಾಗಿಗಳು.
ಅಂಥ ಮಗನು ಸಮಾಜದ ಹಿತಕ್ಕಾಗಿ ಸನ್ಯಾಸಿಯಾಗುವ ಕ್ಷಣದಲ್ಲಿ ಅವರ ಕಣ್ಣಲ್ಲಿ ಕಣ್ಣೀರು ತುಂಬುತ್ತದೆ. ಆದರೆ ಅದು ದುಃಖದದ್ದಲ್ಲ—ಹೆಮ್ಮೆಯದು.
“ನಮ್ಮ ಮಗ ನಮ್ಮ ಮನೆಯವನಾಗಿರಲಿಲ್ಲ… ಸಮಾಜದವನಾದನು” ಎಂಬ ಗರ್ವದ ಕಣ್ಣೀರು.
ಆದರೆ ವರ್ಷಗಳು ಕಳೆಯುತ್ತವೆ. ಮಗನು ಸಮಾಜಕ್ಕೆ ಗುರುವಾಗುತ್ತಾನೆ. ಸಾವಿರಾರು ಜನರು ಅವನ ಆಶೀರ್ವಾದಕ್ಕಾಗಿ ಬರುತ್ತಾರೆ. ಅವನ ಮಾತಿಗೆ ಮೌಲ್ಯ, ಅವನ ಸೇವೆಗೆ ಗೌರವ, ಅವನ ಹೆಸರಿಗೆ ಕೀರ್ತಿ. ಆದರೆ ಅವನನ್ನು ಹೆತ್ತ ತಂದೆತಾಯಿಗಳು ಮಾತ್ರ ವೃದ್ಧಾಪ್ಯದಲ್ಲಿ ಆಶ್ರಯವಿಲ್ಲದೆ, ನೆಲೆಯಿಲ್ಲದೆ, ಮೌನವಾಗಿ ಬದುಕುತ್ತಿದ್ದರೆ—ಅದು ಕೇವಲ ಅವರ ನೋವಲ್ಲ, ಮಾನವತ್ವವೇ ತಲೆತಗ್ಗಿಸುವ ಸಮಾಜದ ನಾಚಿಕೆ.
ಬಾಗಲಕೋಟೆ -ಚಿತ್ರದುರ್ಗದ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ಬದುಕು ಈ ಮೌನ ಸತ್ಯವನ್ನು ನೆನಪಿಸುತ್ತದೆ. ಇಪ್ಪತ್ತೈದು ವರ್ಷಗಳಿಂದ ಸನ್ಯಾಸ ಜೀವನದಲ್ಲಿ ಸಮಾಜಕ್ಕಾಗಿ ತೊಡಗಿಸಿಕೊಂಡಿರುವ ಅವರು, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಊರು ಊರು ಸುತ್ತಿ ಜನಾಂಗವನ್ನು ಸಂಘಟಿಸಿದವರು. ಬಡ ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕು ತಂದವರು. ಕಲ್ಲು ಒಡೆಯುವ ಕೈಗಳಿಗೆ ಆತ್ಮಗೌರವ ಕಲಿಸಿದವರು. ಬದುಕನ್ನು ಕಟ್ಟಿಕೊಳ್ಳುವ ದಾರಿ ತೋರಿಸಿದವರು.
ಆದರೆ ಇಂತಹ ಮಹನೀಯರ ಪೂರ್ವಾಶ್ರಮದ ತಂದೆತಾಯಿಗಳಾದ ಹನುಮಂತಪ್ಪ ಮತ್ತು ಸರೋಜಮ್ಮ ದಾವಣಗೆರೆಯಲ್ಲಿ ದಿನಗೂಲಿ ದುಡಿದು ಬದುಕುವ ಪರಿಸ್ಥಿತಿಯಲ್ಲಿ ಇದ್ದರು ಎಂಬುದು ಕೇಳಿದಾಗ ಮನಸ್ಸು ಕಲುಕುತ್ತದೆ. ಮಗಳ ಮದುವೆಗಾಗಿ ಇದ್ದ ಮನೆಯನ್ನು ಮಾರಿಬಿಟ್ಟು, ಕೊನೆಗೆ ಗುಡಿಸಲಿನಲ್ಲಿ ದಿನ ಕಳೆಯುವ ಸ್ಥಿತಿ ಎದುರಿಸಿದ್ದರು. ಸಮಾಜಕ್ಕೆ ಬೆಳಕಾದ ಮಗನ ತಾಯ್ತಂದೆಗಳು ತಾವೇ ಕತ್ತಲಿನಲ್ಲಿ ಬದುಕುತ್ತಿದ್ದರು.
ನಾವು ಎಷ್ಟೊಂದು ವಿಚಿತ್ರ ಸಮಾಜದಲ್ಲಿ ಬದುಕುತ್ತಿದ್ದೇವೆ! ಸ್ವಾಮೀಜಿಗಳ ಆಶೀರ್ವಾದ ಬೇಕು, ಅವರ ಕೈಯಿಂದ ವರಪ್ರಸಾದ ಬೇಕು, ಅವರ ಹೆಸರಿನಿಂದ ಮಾನಸಮ್ಮಾನ,ಗೌರವಾದರಗಳು ಬೇಕು. ಆದರೆ ಅವರನ್ನು ರೂಪಿಸಿದ ತಂದೆತಾಯಿಗಳ ನೋವು ಕಾಣುವುದಿಲ್ಲವೇಕೆ? ನಾವು ಫಲ ತಿನ್ನುತ್ತೇವೆ, ಆದರೆ ಮರದ ಬೇರು ಒಣಗುತ್ತಿದೆಯೇ ಎಂದು ನೋಡಲು ತಿರುಗುವುದಿಲ್ಲವೇಕೆ?
ಈ ಕರುಳಿನ ತ್ಯಾಗದ ಹಿಂದಿರುವುದು ಮಾತಿಗೆ ಬಾರದ ಮಹಾಮೌನದ ಕಣ್ಣೀರಿನ ಗಾಥೆ -ಇದನ್ನು ಅರ್ಥ ಮಾಡಿಕೊಂಡವರು ಹೊಸದುರ್ಗದ ಕುಂಚಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು. ಅವರು ಆ ತಂದೆತಾಯಿಗಳ ಪರಿಸ್ಥಿತಿಯನ್ನು ಕಂಡು ಕೇವಲ ಕರುಣೆ ಪಡಲಿಲ್ಲ; ಅವರ ಹೃದಯವೇ ಕರಗಿತು. ಅಕ್ಕಮಹಾದೇವಿಯವರ “ನೊಂದವರ ನೋಯದವರೆತ್ತ ಬಲ್ಲರು” ಎಂಬ ವಚನವೇ ಅವರೊಳಗೆ ಜೀವಂತವಾಯಿತು.
ಪ್ರತಿ ವರ್ಷ ತಮ್ಮ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಬಹುದಾಗಿದ್ದವರು, ಆ ಸಂಭ್ರಮವನ್ನು ಬದಿಗಿಟ್ಟು ಸರಳವಾಗಿ ಆಚರಿಸಿಕೊಂಡರು. ಉಳಿದ ಹಣವನ್ನು ಸಂಗ್ರಹಿಸಿ ದಾವಣಗೆರೆಯ ಕೊಂಡಜ್ಜಿ ರಸ್ತೆಯಲ್ಲಿರುವ ಯರಗುಂಟೆಯಲ್ಲಿ ಒಂದು ಜಾಗ ಖರೀದಿಸಿದರು. ಅಲ್ಲಿ ಒಂದು ಸುಂದರ ಮನೆಯನ್ನು ಕಟ್ಟಿಸಿದರು. ಆ ಮನೆಗೆ “ಸಿದ್ದರಾಮ ಸಿಂಚನ” ಎಂದು ಹೆಸರು ಇಟ್ಟರು. ಅದು ಕೇವಲ ಮನೆಗೆ ಇಟ್ಟ ಹೆಸರು ಅಲ್ಲ; ಕೃತಜ್ಞತೆಗೆ ಕೊಟ್ಟ ರೂಪ.
ಮೇ 1—ಬುದ್ಧ ಪೌರ್ಣಿಮೆ, ವಿಶ್ವ ಕಾರ್ಮಿಕರ ದಿನ. ಐವತ್ತು ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಆ ಮನೆಯನ್ನು ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳವರ ಪೂರ್ವಾಶ್ರಮದ ತಂದೆತಾಯಿಗಳಿಗೆ ಹಸ್ತಾಂತರಿಸಲಾಯಿತು. ಆ ಕ್ಷಣದಲ್ಲಿ ಮನೆ ಮಾತ್ರ ಕೊಡಲಿಲ್ಲ—ಗೌರವ ನೀಡಲಾಯಿತು. ಆಶ್ರಯ ಮಾತ್ರ ಕೊಡಲಿಲ್ಲ—ಮರೆಯಾದ ತ್ಯಾಗಕ್ಕೆ ಮನ್ನಣೆ ನೀಡಲಾಯಿತು. ಕಣ್ಣೀರು ಮಾತ್ರ ಒರೆಸಲಿಲ್ಲ—ಸಮಾಜದ ಮನಸ್ಸನ್ನೇ ತೊಳೆಯಲಾಯಿತು.
ಒಬ್ಬ ತಾಯಿ ಮನೆ ಬಾಗಿಲಲ್ಲಿ ನಿಂತು ಕಣ್ಣೀರಿನಿಂದ ಒಳಗೆ ನೋಡಿರಬಹುದು. ಒಬ್ಬ ತಂದೆ ಗೋಡೆಯನ್ನು ಸ್ಪರ್ಶಿಸಿ ಮೌನವಾಗಿ ನಿಟ್ಟುಸಿರು ಬಿಟ್ಟಿರಬಹುದು. “ನಮ್ಮ ಮಗ ಸಮಾಜಕ್ಕೆ ಕೊಟ್ಟೆವು; ಸಮಾಜ ನಮ್ಮನ್ನು ಮರೆಯಲಿಲ್ಲ” ಎಂಬ ಭಾವನೆ ಅವರ ಹೃದಯದಲ್ಲಿ ಮೂಡಿರಬಹುದು. ಆ ಕ್ಷಣದ ಮೌಲ್ಯವನ್ನು ಅಳೆಯಲು ಯಾವ ತಕ್ಕಡಿ ಸಾಲದು.
ಈ ಘಟನೆ ನಮಗೆ ದೊಡ್ಡ ಪಾಠ ಹೇಳುತ್ತದೆ. ಧರ್ಮವೆಂದರೆ ಕೇವಲ ಪೂಜೆ ಅಲ್ಲ. ಮಠ ಕಟ್ಟುವುದು ಮಾತ್ರ ಅಲ್ಲ. ಜಾತ್ರೆ, ಜಾತ್ರೋತ್ಸವ, ಘೋಷಣೆ, ಗೌರವ ಸಮಾರಂಭ ಮಾತ್ರ ಅಲ್ಲ. ನಿಜವಾದ ಧರ್ಮ ಎಂದರೆ ಮೌನವಾಗಿ ಅಳುವವರ ಬಳಿ ನಿಲ್ಲುವುದು. ತ್ಯಾಗ ಮಾಡಿದವರ ಕಣ್ಣೀರನ್ನು ಒರೆಸುವುದು. ಬೆಳಕನ್ನು ಕೊಟ್ಟವರ ಅಡಿಯ ಕತ್ತಲನ್ನು ಹೋಗಲಾಡಿಸುವುದು.
“ಸಿದ್ದರಾಮ ಸಿಂಚನ” ಕೇವಲ ಒಂದು ಮನೆ ಅಲ್ಲ. ಅದು ತಾಯಿಯ ತ್ಯಾಗದ ಕಣ್ಣೀರಕ್ಕೆ,ತಂದೆಯ ಭಕ್ತಿ ಶಕ್ತಿ ಶ್ರದ್ಧೆಯ ಮೌನವೃತಕ್ಕೆ ನೀಡಿದ ಸ್ಮಾರಕ. ಸಮಾಜದ ಮರೆವಿಗೆ ಹೊಡೆದ ಎಚ್ಚರಿಕೆಯ ಘಂಟೆ.
ದೀಪದ ಬೆಳಕನ್ನು ಎಲ್ಲರೂ ಕಾಣುತ್ತಾರೆ; ಆದರೆ ಅದರ ಕೆಳಗಿನ ಕತ್ತಲನ್ನು ಗುರುತಿಸಿ, ಅದನ್ನು ನೀಗಿಸಲು ಕೈಹಾಕುವವರೇ ನಿಜವಾದ ಮಹಾನುಭಾವರು. ಅಂತಹ ಕರುಣಾಮೂರ್ತಿ, ತ್ಯಾಗಶೀಲ, ಸ್ನೇಹಜೀವಿ—ಕುಂಚಟಿಗ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳವರು.
ಶರಣಶ್ರೀ ಹನುಮಂತಪ್ಪ ಮತ್ತು ಶರಣೆ ಸರೋಜಮ್ಮ ದಂಪತಿಗಳು, ‘ಬಾಗಿದ ತಲೆ—ಮುಗಿದ ಕೈ’ಯಾಗಿ ‘ಸಿದ್ಧರಾಮ ಸಿಂಚನ’ ಉನ್ನತಾಲಯದ ಮಹಾದ್ವಾರದಲ್ಲಿ ನಿಂತು “ಶರಣರ ಬರವೆಮಗೆ ಪ್ರಾಣಜೀವಾಳ”ವೆಂದು ಹೃದಯಪೂರ್ವಕವಾಗಿ ಸ್ವಾಗತಿಸಿದ ಕ್ಷಣದಲ್ಲಿ—ಸಾಕ್ಷಾತ್ ವಿಶ್ವಗುರು ಬಸವಣ್ಣನವರು ಧರ್ಮಪತ್ನಿ ನೀಲಾಂಬಿಕೆಯೊಂದಿಗೆ ನಿಂತು ಬರಮಾಡಿಕೊಂಡರೆಯೆಂಬ ಭಾವ ಮೂಡಿತು.
ಮಹಾಮನೆಯೊಳಗೆ ಜಗದ ಜಂಗಮರೊಂದಿಗೆ ಪಾದಾರ್ಪಣೆ ಮಾಡಿದ ನಾವು,’ಶಬ್ದದೊಳಗಣ ನಿಶ್ಯಬ್ಧ’ವಾಗಿ ಆ ದಿವ್ಯ ಕ್ಷಣಕ್ಕೆ ಸಾಕ್ಷಿಯಾದುದು—
ನಮ್ಮ ಅಹೋಭಾಗ್ಯ.
ಮನದ ಕೊನೆಯ ಮೊನೆಯ ಮಾತು—
ಇದು ಒಬ್ಬ ಮಠಾಧೀಶರ ಮಾತಾಪಿತಗಳ ತ್ಯಾಗದ ಕರಾಳ ಕಥೆಯಷ್ಟೇ ಅಲ್ಲ; ಸಮಾಜವು ಅರಿವಿನ ಬೆಳಕಿನಲ್ಲಿ ಹುಡುಕಿದರೆ ಅನೇಕ ಮೌನಗಾಥೆಗಳು ಹೊರಹೊಮ್ಮುತ್ತವೆ. ಬರೀಗಣ್ಣಿನಿಂದ ನೋಡಿಯು ನೋಡದಂತೆ ಮೌನವಾಗಿದ್ದರೆ ಕಣ್ಣೀರು ಕಾಣದು;
ಕುಂಚಾದ್ರಿ ಶಿಖರದ ಶಾಂತವೀರರ ವಿಶಾಲ ದೃಷ್ಟಿಯಿಂದ ನೋಡಿದಾಗಲೇ
ಅಗೋಚರ ಗಾಥೆಗಳು ಬೆಳಕಿಗೆ ಬರುತ್ತವೆ.
ಹರಗುರು ಚರಣ ಸೇವೆಯಲ್ಲಿ
ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ(ಹರಪೀಠ) ಹರಿಹರ.