10/09/2025
ಜನಪ್ರಿಯ ಗೆಳೆಯರ ಬಳಗದ ವತಿಯಿಂದ ಅದ್ದೂರಿ ಗಣಪತಿ ಉತ್ಸವ.
ಗೌರಿ-ಗಣೇಶ ಹಬ್ಬದ ಅಂಗವಾಗಿ ಜನಪ್ರಿಯ ಆಸ್ಪತ್ರೆ ಆವರಣದಲ್ಲಿ ಜನಪ್ರಿಯ ಗೆಳೆಯರ ಬಳಗದ ವತಿಯಿಂದ ಹತ್ತನೇ ವರ್ಷದ ಸೌಹಾರ್ದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು. ಇದರ ಅಂಗವಾಗಿ 700ಕ್ಕೂ ಹೆಚ್ಚು ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೇಯಸ್ ಎಂ ಪಟೇಲ್ ರವರು ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು, ಜಾತಿ, ಮತ, ಪಂಥಗಳ ಎಲ್ಲೆ ಮೀರಿದ ಸಮಾಜವಿದ್ದರೇ ಒಳ್ಳೆಯದು ಎಂಬ ಸಂದೇಶ ಡಾ. ಬಶೀರ್ ರವರು ನೀಡಿದ್ದಾರೆ. ಜನಪ್ರಿಯ ಆಸ್ಪತ್ರೆಯಲ್ಲಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡಿ ಸಾವಿರಾರು ಜನರ ಬದುಕಿಗೆ ನೆರವಾಗಿದ್ದಾರೆ ಅವರಿಗೆ ಭಗವಂತನು ಆಯಸ್ಸು ಆರೋಗ್ಯ ನೀಡಲೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಹೆಮ್ಮಿಗೆ ಮೋಹನ್ ರವರು ಭಾಗವಹಿಸಿ ಮಾತನಾಡಿ ರಾಷ್ಟ್ರಕವಿ ಕುವೆಂಪುರವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ವಾಕ್ಯದಂತೆ, ಎಲ್ಲಾ ಧರ್ಮಗಳನ್ನು ಪ್ರೀತಿಸುವ ಮತ್ತು ಗೌರವಿಸುವ ಜನಪ್ರಿಯ ಆಸ್ಪತ್ರೆ ಮುಖ್ಯಸ್ಥರಾದ ಡಾ. ವಿ.ಕೆ.ಅಬ್ದುಲ್ ಬಷೀರ್ ಅವರು ಮಾದರಿಯಾಗಿದ್ದಾರೆ, ಇಂತಹ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿರುವ ಎಲ್ಲರಿಗೂ ಧನ್ಯವಾದಗಳು ಮತ್ತು ವೈದ್ಯ ವೃತ್ತಿಯ ಜೊತೆಗೆ ಸಮಾಜಸೇವೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಡಾಕ್ಟರ್ ರವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಸಮಾಜ ಸೇವಕರಾದ ಆರ್ ಪಿ ವೆಂಕಟೇಶ್ ಮೂರ್ತಿ ಮಾತನಾಡಿ ವಿವಿಧತೆಯಲ್ಲಿ ಏಕತೆ ಸಾರುವ ದೇಶ ಭಾರತ. ಇಲ್ಲಿ ಎಲ್ಲಾ ಧರ್ಮೀಯರು ವಾಸಿಸುತ್ತಿದ್ದಾರೆ. ಗೌರಿ, ಗಣೇಶ ಹಬ್ಬದಲ್ಲಿ ನಡೆದ ಅನ್ನಸಂತರ್ಪಣೆ ಕಾರ್ಯದಲ್ಲೂ ಹಿಂದೂಗಳ ಜತೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಿಬ್ಬಂದಿಗಳು ಪಾಲ್ಗೊಂಡು ಸಾಮೂಹಿಕವಾಗಿ ಊಟ ಬಡಿಸಿ, ಸಾಮರಸ್ಯ ಮೆರೆದಿದ್ದನ್ನು ಕೊಂಡಾಡಿದರು.
ಜನಪ್ರಿಯ ಫೌಂಡೇಶನ್‍ನ ಮುಖ್ಯಸ್ಥರಾದ ಡಾ.ವಿ.ಕೆ ಅಬ್ದುಲ್ ಬಷೀರ್ ಅವರು ಮಾತನಾಡಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು, ಭಗವಂತನು ಎಲ್ಲರಿಗೂ ಆಯಸ್ಸು ಆರೋಗ್ಯ ನೀಡಲಿ, ನಮ್ಮ ಆಸ್ಪತ್ರೆ ಆವರಣದಲ್ಲಿ ಜನಪ್ರಿಯ ಗೆಳೆಯರ ಬಳಗದ ವತಿಯಿಂದ ಹತ್ತು ವರ್ಷಗಳಿಂದ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮತ್ತು ಅನ್ನಸಂತರ್ಪಣ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಚರಿಸಿ ಸಮಾಜದಲ್ಲಿ ಶಾಂತಿಯ ಸಂದೇಶ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಚೌತಿ ಸಂಭ್ರಮಕ್ಕೆ ಅಂದು ಬ್ರಿಟಿಷ್ ಆಡಳಿತದ ವಿರುದ್ಧ ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಲು 1893ರಲ್ಲಿ ಬಾಲಗಂಗಾಧರ್ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಅದಕ್ಕೊಂದು ನೂತನ ಸ್ವರೂಪ ನೀಡಿದರು. ಬಳಿಕ ಗಣೇಶನ ಹಬ್ಬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿ ರಾಷ್ಟ್ರೀಯವಾದಿ ಚಳುವಳಿಯ ಸಂಕೇತವಾಯಿತು ಎಂದು ಹೇಳಿದರು.
ಬಿಜೆಪಿ ಯುವ ಮುಖಂಡರಾದ ಅಗರ್ವಾಲ್ ರವರು ಮಾತನಾಡಿ ವಿಘ್ನೇಶ್ವರನ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಅನ್ನಸಂತರ್ಪಣ ಕಾರ್ಯಕ್ರಮವನ್ನು ಚೆನ್ನಾಗಿ ಆಯೋಜಿಸಿದ್ದಾರೆ. ಆಸ್ಪತ್ರೆಯು ಹೆಸರಿಗೆ ತಕ್ಕನಾಗಿ ಜನಪ್ರಿಯವಾಗಲಿ ಎಂದು ಶುಭ ಹಾರೈಸಿ ಡಾಕ್ಟರ್ ಬಶೀರ್ ರವರ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜನಪ್ರಿಯ ಆಸ್ಪತ್ರೆ ವೈದ್ಯರಾದ ಡಾ. ಪ್ರವೀಣ್, ಡಾ. ಮನೋಜ್ ಕುಮಾರ್, ಡಾ. ಸುಹಾಸ್, ಡಾ. ಮುರುಳಿಧರ್, ಡಾ. ಲೋಹಿತ್, ಡಾ. ಫೈಸಲ್, ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕರಾದ ಎಚ್.ಡಿ.ಕುಮಾರ್, ಎಸ್ ಎಸ್ ಪಾಷಾ, ಸುಬ್ಬುಸ್ವಾಮಿ, ಬಿ.ಆರ್.ಉದಯಕುಮಾರ್, ಜಯಶ್ರೀ ಕೆ.ಟಿ, ಡಾ. ಕಾವ್ಯಶ್ರೀ, ಗಿರೀಶ್, ಜಯಪ್ರಕಾಶ್, ಗಿರಿಗೌಡ, ಭೀಮರಾಜ್, ಜನಪ್ರಿಯ ಆಡಳಿತ ಅಧಿಕಾರಿ ಮಹಮ್ಮದ್ ಕಿಸಾರ್, ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.