25/11/2025
ನೋವಿನ ಕತೆ:
ಒಬ್ಬಾತ ನೋವು, ದುಃಖ ಸಹಿಸಲಾರದೇ, ಪರಿಹಾರಕ್ಕಾಗಿ ಋಷಿಯ ಬಳಿಗೆ ಹೋದನು. ಋಷಿಯು ಆತನ ನೋವನ್ನು ಕಡಿಮೆ ಮಾಡಲು ಸಮ್ಮತಿಸಿದನು. ಆದರೆ ಋಷಿಯು ಆತನಿಗೊಂದು ಕೆಲಸ ವಹಿಸಿದ. ಅದೇನೆಂದರೆ, ಒಂದು ಚಮಚದಲ್ಲಿ ಎಣ್ಣೆ ತುಂಬಿಸಿ, ಒಂದೂ ಚೂರು ಸೋರಿಕೆಯಿಲ್ಲದೆ, ಊರಿನಲ್ಲಿ ಒಮ್ಮೆ ಸುತ್ತುವ ಕೆಲಸ.
ಆತನು ಇಡೀ ಊರಿನಲ್ಲಿ ಎಣ್ಣೆಯಿರುವ ಚಮಚವನ್ನು ಸೋರಿಕೆಯಿಲ್ಲದೆ, ಕೈಯಲ್ಲಿ ಹಿಡಿದು ಊರನ್ನು ಯಶಸ್ವಿಯಾಗಿ ತಿರುಗಿ ಬಂದ.
ಊರಿನ ದೊಡ್ಡ ವೃತ್ತದಲ್ಲಿರುವ ಹೂ ಗಿಡಗಳನ್ನು ನೋಡಿದೆಯಾ ಎಂದು ಋಷಿ ಅವನನ್ನು ಕೇಳಿದರು, ಆತ ಇಲ್ಲವೆಂದ. ಮಕ್ಕಳು ಆಡುವುದು, ವಿನೋದವಾಗಿ ಕಾಲ ಕಳೆಯುವುದು, ಜನರು ಹರಟೆ ಹೊಡೆಯುವುದನ್ನು ಗಮನಿಸಿದೆಯಾ ಎಂದು ಋಷಿ ಆತನನ್ನು ಕೇಳಿದಾಗ, ಚಮಚದಲ್ಲಿರುವ ಎಣ್ಣೆಯ ಬಗ್ಗೇನೆ ತನ್ನ ಗಮನವಿತ್ತು,
ಆದ್ದರಿಂದ ಬೇರೇನೂ ಗಮನಿಸಲಿಲ್ಲವೆಂದ ಆತ.
ನಿನ್ನ ಗಮನ ಚಮಚದಲ್ಲಿಯೇ ಇದ್ದುದರಿಂದ, ಬೇರೇನೂ ಗಮನಿಸಲಿಲ್ಲ , ಆದ್ದರಿಂದ ಊರಿನ ಸುಂದರ ದೃಶ್ಯಗಳನ್ನು ನೋಡಲಾಗಲಿಲ್ಲ ಎಂದು ಋಷಿಯು ಹೇಳಿದ.
ನಿನಗಿರುವ ನೋವು ಕೂಡ ಆ ಎಣ್ಣೆಯಿರುವ ಚಮಚದಂತೆ, ಉಳಿದ ನಿನ್ನ ಜೀವನದ ಭಾಗ, ಊರಿನ ಸುಂದರ ಸ್ಥಳಗಳಂತೆ.
ನೋವಿನ ಚಿಂತೆಯು ನಿನ್ನ ಸಂಪೂರ್ಣ ಗಮನ ಸೆಳೆಯುತ್ತಿರುವುದರಿಂದ, ಸುತ್ತಲಿರುವ ಸೌಂದರ್ಯದಿಂದ ನೀನು ವಂಚಿತನಾಗಿದ್ದೀಯಾ, ಎಂದನು ಋಷಿ.
ನೋವು ಜೀವನದೊಂದು ಭಾಗವಾದರೆ, ಅದೊಂದರ ನೆರಳೇ ನನ್ನ ಉಳಿದ ಭಾಗವನ್ನು ಕಾಣದಂತೆ ಮಾಡ್ತಾ ಇದೆಯೆಂದು ಆ ಶಿಷ್ಯನಿಗೆ ಅರ್ಥವಾಯಿತು.