01/03/2024
An article on " The impact of supressing Natural urges - Urine " by Dr. Ranjani Bidaralli.
#ವೇಗಧಾರಣ
ದೇಹದಲ್ಲಿ ಉತ್ಪತ್ತಿಯಾಗುವ ಸ್ವಾಭಾವಿಕ ಕ್ರಿಯೆಗಳಾದ 'ವೇಗ'ವನ್ನು ಧಾರಣೆ ಮಾಡಬಾರದು ಎಂಬ ವಿಷಯದ ಬಗ್ಗೆ ಕಳೆದ ವಾರ ತಿಳಿದೆವು. ದೈನಂದಿನ ಜೀವನದಲ್ಲಿ ನಮಗೆ ಅರಿವಿಲ್ಲದೆ ಈ ವೇಗಗಳನ್ನು ನಾವು ಧಾರಣೆ ಮಾಡುತ್ತೇವೆ ಎಂದರೆ ತಡೆಹಿಡಿಯುತ್ತೇವೆ. ದೇಹದ ಕಲ್ಮಶಗಳನ್ನು ಹೊರಹಾಕಲು ಇರುವ ಏಕೈಕ ಸಾಧನ ಈ ವೇಗಗಳು. ರಭಸದಿಂದ ಬರುವ ಈ ಕಾರ್ಯಕ್ಕೆ ವೇಗ ಎಂಬ ಅನ್ವರ್ಥನಾಮ ಇಟ್ಟಿದ್ದಾರೆ. ಇವುಗಳನ್ನು ತಡೆ ಹಿಡಿಯುವುದು ಎಂದರೆ ರಭಸದಿಂದ ಹರಿಯುತ್ತಿರುವ ಚರಂಡಿಗೆ ಅಡ್ಡಗೋಡೆ ಕಟ್ಟಿದಂತೆ. ಇದರಿಂದ ದೇಹದಲ್ಲಿಯೇ ಕಲ್ಮಶಗಳು ಸಂಗ್ರಹವಾಗಿ ದೇಹವು ಕಲ್ಮಶ ತುಂಬಿದ ಟ್ಯಾಂಕ್ ಗಳಾಗುತ್ತದೆ. ಅತ್ಯಂತ ಅನಾರೋಗ್ಯಕರ ಇಂತಹ ವಾತಾವರಣದಲ್ಲಿ ಆರೋಗ್ಯ ನಿರೀಕ್ಷಿಸುವುದು ಹೇಗೆ ಸಾಧ್ಯ?? ಅದರ ಕಡೆ ನಮ್ಮ ಗಮನವೇ ಇಲ್ಲ. ಕೊಳಚೆ ನೀರು ತುಂಬಿದ ಕಡೆ ಎಷ್ಟು ಸುಗಂಧ ದ್ರವ್ಯ ಹಾಕಿದರು ಅದು ತಾತ್ಕಾಲಿಕವಷ್ಟೇ. ಸೂಕ್ತ ಪರಿಹಾರಕ್ಕೆ ಕೊಳಚೆಯು ಹೊರಹೋಗಲು ತಡೆದಿರುವ ಅಡ್ಡಗೋಡೆಯನ್ನು ಕೆಡಬೇಕು. ಆದರೆ ನಾವು ದಿನನಿತ್ಯ ಈ ಗೋಡೆಯನ್ನು ಬಲಪಡಿಸಿ ಮೇಲೆ ಏರಿಸುತ್ತಿದ್ದೇವೆ.
ವೇಗಧಾರಣ ಎಂದರೆ ದೇಹದಿಂದ ಕಾಲಕಾಲಕ್ಕೆ ಹೊರ ಹೋಗಲೇಬೇಕಾದ ಕಲ್ಮಶಗಳನ್ನು ತಡೆಹಿಡಿದರೆ ಮತ್ತೆ ರೋಗಕ್ಕೆ ಬುನಾದಿ ಹಾಕಿದಂತೆ. ಹಾಗಾಗಿ ಈ ವೇಗದಾರಣೆಯ ಬಗ್ಗೆ ವಿಷದವಾಗಿ ತಿಳಿಯುವುದರಲ್ಲಿದೆ ಆರೋಗ್ಯದ ಗುಟ್ಟು. ಬನ್ನಿ ಅದರ ಬಗ್ಗೆ ತಿಳಿಯೋಣ.
ಕಳೆದ ವಾರ ನೋಡಿದಂತೆ ವೇಗಗಳು ಮಲ, ಮೂತ್ರ, ಹಸಿವು, ಬಾಯಾರಿಕೆ, ವಾಂತಿ, ಕೆಮ್ಮು, ಸೀನು ಮುಂತಾದವುಗಳು. ಪ್ರತಿಯೊಂದರಿಂದಲೂ ಆಗುವ ಪರಿಣಾಮ ಹಾಗೂ ಅದರ ಪರಿಹಾರವನ್ನು ನೋಡೋಣ.
ಮೂತ್ರ ವೇಗಧಾರಣೆ :
ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಮೂತ್ರಕ್ಕೆ ಹೋಗಬೇಕೆನಿಸಿದಾಗ ಹೋಗದಿರುವುದು. ಸಂಕೋಚ ಸ್ವಭಾವದಿಂದಲೋ ಅಥವಾ ಶುಚಿತ್ವಕ್ಕೆ ಕೊಡುವ ಮಹತ್ವದಿಂದಲೋ, ಕೆಲಸದ ಒತ್ತಡದಿಂದಲೋ, ಮುಖ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಅಭ್ಯಾಸವಿದು. ಈ ರೀತಿ ಮೂತ್ರ ತಡೆಯುವುದರಿಂದ ಮೂತ್ರಾಶಯ ಹಾಗೂ ಮೂತ್ರೀಂದ್ರಿಯದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಳ ಹೊಟ್ಟೆ ಅಥವಾ ಕಿಬ್ಬೊಟ್ಟೆಯ ನೋವು ಸಾಮಾನ್ಯವಾಗಿ ಮೂತ್ರ ತಡೆಯುವವರಲ್ಲಿ ಹೆಚ್ಚಾಗಿ ಈ ಕಾರಣದಿಂದ ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆ ಸಮಯದಲ್ಲಿ ನೋವು ಇದೇ ಕಾರಣದಿಂದ ಉಂಟಾಗುತ್ತದೆ. ಈ ನೋವು ಎಷ್ಟು ತೀವ್ರತರವಾಗಿ ಇರುತ್ತದೆ ಎಂದರೆ ವ್ಯಕ್ತಿಯು ಕೆಳಹೊಟ್ಟೆಯ ಭಾಗವನ್ನು ಒತ್ತಿ ಹಿಡಿದು ಮುಂದೆ ಬಾಗುತ್ತಾನೆ. ಇದರಿಂದ ಸ್ವಲ್ಪ ಮಟ್ಟಿನ ಸಮಾಧಾನ ದೊರೆಯುತ್ತದೆ. ಈ ನೋವು ಪದೇ ಪದೇ ಮುಂದುವರಿದರೆ ನೀವು ಮೂತ್ರದ ವೇಗವನ್ನು ಸರಿಯಾದ ಸಮಯಕ್ಕೆ ಹೊರಹಾಕುತ್ತಿಲ್ಲ ಎಂದರ್ಥ.
ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ ಮೂತ್ರ ವೇಗ ತಡೆಯುವುದು ತಲೆ ನೋವಿಗೂ ಕಾರಣವಾಗುತ್ತದೆ. ಜನಸಂಖ್ಯೆಯ 99% ಜನರು ತಲೆನೋವಿನಿಂದ ಒಮ್ಮೆಯಾದರೂ ಬಳಲುತ್ತಾರೆ. ಕೆಲವರ ತಲೆನೋವಿಗೆ ಕಾರಣವೇ ದೊರೆಯುವುದಿಲ್ಲ. ಹಾಗಾಗಿ ಪರಿಹಾರವೂ ದೂರದ ಮಾತು. ಹತ್ತು ಹದಿನೈದು ವೈದ್ಯರನ್ನು ಕಂಡರೂ, ನೂರಾರು ಪರೀಕ್ಷೆಗಳನ್ನು ಮಾಡಿಸಿದರು, ಪರಿಹಾರ ಶೂನ್ಯ. ಎಲ್ಲವೂ ಸರಿ ಇದೆ, ಆದರೆ ತಲೆನೋವು ಮಾತ್ರ ಗುಣ ಕಾಣುತ್ತಿಲ್ಲ. ಹೀಗಿದ್ದಾಗ ವೇಗಧಾರಣೆಯು ಕಾರಣವಾಗಿರಬಹುದು ಎಂಬುದರ ಬಗ್ಗೆ ನಿಮ್ಮ ಗಮನವಿರಲಿ. ಒತ್ತಡಯುತ ಜೀವನ ಶೈಲಿಯಲ್ಲಿ ಮೂತ್ರಕ್ಕೆ ಹೋಗಬೇಕೆಂಬ ಹಂಬಲ ತಡೆಯುವುದು ಸರ್ವೇಸಾಮಾನ್ಯ ಹಾಗೂ ದೈನಂದಿನ ಅಭ್ಯಾಸ. ಇದರಿಂದ ನಿಧಾನವಾಗಿ ನರಮಂಡಲದ ಮೇಲೆ ಒತ್ತಡ ಹೆಚ್ಚಾಗಿ ತಲೆ ನೋವಿಗೆ ಮುನ್ನುಡಿಯಾಗುತ್ತದೆ. ನಂತರದ ದಿನಗಳಲ್ಲಿ ತಲೆನೋವಿನ ಮುಖ್ಯ ಕಾರಣವೂ ಮೂತ್ರ ತಡೆಹಿಡಿಯುವುದೇ ಆಗುತ್ತದೆ.
ಮೂತ್ರ ತಡೆಯುವುದರಿಂದ ಇಡೀ ಶರೀರದ ತೀವ್ರತರವಾದ ನೋವು ಉಂಟಾಗುತ್ತದೆ ಎಂದು ತಿಳಿಸಿದ್ದಾರೆ ವಾಗ್ಬಟಾಚಾರ್ಯರು. ಮೂತ್ರಕೋಶದ ಕಲ್ಲು ಇಂದು ಸರ್ವೇಸಾಮಾನ್ಯವಾಗಿದೆ. ಈಗ ಬರುವ ಬೇಸಿಗೆ ಇದಕ್ಕೆ ಹೇಳಿ ಮಾಡಿಸಿದ ಕಾಲ. ಈ ಬೇಸಿಗೆಯಲ್ಲಿ ಮೂತ್ರದ ಕಲ್ಲಿನಿಂದ ನೀವು ಬಳಲಬಾರದು ಎಂದಿದ್ದರೆ ಮಾಡಬೇಕಾದದ್ದು ಮೂತ್ರವನ್ನು ತಡೆ ಹಿಡಿಯದಿರುವುದು. ಮೂತ್ರ ಮಾರ್ಗದಲ್ಲಿ ಕಲ್ಲಾಗಬಾರದು ಎಂದರೆ ಸರಿಯಾದ ಪ್ರಮಾಣ ನೀರು ಕುಡಿಯಬೇಕು ಎಂಬುದಷ್ಟೇ ಗೊತ್ತು. ಆದರೆ ಅದಕ್ಕಿಂತ ಮುಖ್ಯವಾದದ್ದು ಮೂತ್ರವನ್ನು ತಡೆಯದಿರುವುದು.
ಇಷ್ಟೆಲ್ಲ ಇದರ ಬಗ್ಗೆ ತಿಳಿದ ಮೇಲೆ ಮುಂದಾದರೂ ಮೂತ್ರ ವೇಗವನ್ನು ತಡೆಯುವುದಿಲ್ಲ ಎಂಬ ಬಗ್ಗೆ ನೀವು ಗಮನಿಸುತ್ತೀರಿ ಎಂದು ನಂಬಿದ್ದೇನೆ. ಆದರೆ ಇದನ್ನು ಮತ್ತೊಂದು ರೀತಿಯಲ್ಲಿ ಅರ್ಥೈಸಿಕೊಂಡೆ ಕೊಂಡು ತೊಂದರೆ ಮಾಡಿಕೊಳ್ಳುವವರು ಇದ್ದಾರೆ. ಮುಖ್ಯವಾಗಿ ಕಾಲೇಜು ಹಾಗೂ ಆಫೀಸಿನಲ್ಲಿರುವ ಮಹಿಳೆಯರು ಕಂಡುಕೊಂಡ ಪರಿಹಾರವಿದು. ಮೂತ್ರ ಉತ್ಪತ್ತಿಯಾದರಷ್ಟೇ ಮೂತ್ರಕ್ಕೆ ಹೋಗುವ ಸಮಸ್ಯೆ. ನೀರು ಕುಡಿದರೆ ಮಾತ್ರ ಮೂತ್ರದ ಉತ್ಪತ್ತಿ, ಹಾಗಾಗಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೀರನ್ನು ಸೇವಿಸುತ್ತಾರೆ ಹಲವರು. ಇದು ಅವರು ಕಂಡುಕೊಂಡಿರುವ ಪರಿಹಾರ. ಆದರೆ ಇದು ಮೂತ್ರ ತಡೆ ಹಿಡಿಯುವುದಕ್ಕಿಂತ ಹೆಚ್ಚಿನ ತೊಂದರೆ ಮಾಡುತ್ತದೆ. ಅದು ಬಾಯಾರಿಕೆ ತಯುವುದು, ತೃಷ್ಣಾ ವೇಗಧಾರಣೆ. ಬಾಯಾರಿದಾಗ ನೀರು ಸೇವಿಸದಿರುವುದು ಕೂಡಾ ರೋಗಕ್ಕೆ ಕಾರಣ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ವಿಷದವಾಗಿ ಚರ್ಚಿಸೋಣ . ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸಿ, ಮೂತ್ರ ಒತ್ತಡವಿದ್ದಾಗ ಮೂತ್ರ ವಿಸರ್ಜನೆ ಮಾಡುವುದು ಆರೋಗ್ಯಕರ ಜೀವನಶೈಲಿ. ದೇಹದ ಆರೋಗ್ಯ ಕಾಪಾಡಲು ಒಂದು ಹೆಜ್ಜೆ ಇದು.
ಇಷ್ಟು ದಿನ ಮೂತ್ರ ತಡೆದಿದ್ದೇವೆ, ಅದರಿಂದ ತೊಂದರೆಯನ್ನು ಅನುಭವಿಸಿದ್ದೇವೆ. ಇದಕ್ಕೆ ಪರಿಹಾರವಿಲ್ಲವೇ ಎಂದು ಕೇಳಿದರೆ, ಪರಿಹಾರವಿದೆ...ಮೂತ್ರ ತಡೆಯುವುದರಿಂದ ಉಂಟಾದ ತೊಂದರೆಗೆಂದೇ ವಿಷದವಾಗಿ ಚಿಕಿತ್ಸೆಯನ್ನು ವಿವರಿಸಿದ್ದಾರೆ. ಈ ಚಿಕಿತ್ಸೆಗಳಿಂದ ಎಷ್ಟೋ ವರ್ಷಗಳ ತೊಂದರೆಗೆ ಪರಿಹಾರ ದೊರಕಿದೆ ಎಂದು ಅನೇಕ ರೋಗಿಗಳು ತಮ್ಮ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಪರಿಹಾರ ಕಾಣದ ಎಷ್ಟೋ ಹೊಟ್ಟೆ ನೋವು, ತಲೆನೋವಿಗೂ ಈ ಚಿಕಿತ್ಸೆಗಳು ಪರಿಹಾರ ದೊರಕಿಸಿವೆ. ಆದರೆ ಈ ಚಿಕಿತ್ಸೆಗಳನ್ನು ತಜ್ಞ ವೈದ್ಯರ ಸಲಹೆ ಸೂಚನೆಗೆ ಒಳಪಟ್ಟು ಸೇವಿಸಿದಾಗ ಮಾತ್ರ ಪರಿಹಾರ ಸಾಧ್ಯ. ಈ ಚಿಕಿತ್ಸೆಯಲ್ಲಿ ಮುಖ್ಯವಾಗಿ ಹೇಳಿರುವುದು ಅವಪೀಡಕ ಸರ್ಪಿ ಪ್ರಯೋಗ. ಇದರಲ್ಲಿ ಔಷಧಿಯನ್ನು ಆಹಾರದ ಮೊದಲು ಅಥವಾ ನಂತರ ನಿರ್ದಿಷ್ಟ ಸಮಯ ಹಾಗೂ ಪ್ರಮಾಣದಲ್ಲಿ ನೀಡಲಾಗುತ್ತದೆ. ಮತ್ತೊಂದು ಪ್ರಭಾವಿ ಚಿಕಿತ್ಸೆ ಬಸ್ತಿ. ಮಲದ್ವಾರದ ಮೂಲಕ ಔಷಧಿಯನ್ನು ನೀಡುವುದು ಬಸ್ತಿ ಚಿಕಿತ್ಸೆ. ಇದರ ಪ್ರಭಾವ ಅತ್ಯಂತ ವಿಶಿಷ್ಟವಾದದ್ದು. ಹಿಂದೆಯೂ ಇದರ ಬಗ್ಗೆ ಚರ್ಚಿಸಿದ್ದೇವೆ. ಮುಂದೆಯೂ ಹಲವು ತೊಂದರೆಗಳಲ್ಲಿ ಬಸ್ತಿ ಚಿಕಿತ್ಸೆಯ ಬಗ್ಗೆ ಚರ್ಚಿಸಲಾಗುತ್ತದೆ. ಬಸ್ತಿ ಚಿಕಿತ್ಸೆಯ ವಿಸ್ತಾರತೆಯನ್ನು ಇದು ತೋರಿಸುತ್ತದೆ. ಆದ್ದರಿಂದ ಆಯುರ್ವೇದದಲ್ಲಿ ಬಸ್ತಿಗೆ ಅರ್ಧ ಚಿಕಿತ್ಸೆ ಎಂದು ಕರೆಯಲಾಗಿದೆ. ಎಂದರೆ ಉಳಿದೆಲ್ಲ ಚಿಕಿತ್ಸೆಗಳ ತೂಕ ಒಂದಡೆಯಾದರೆ ಬಸ್ತಿ ಚಿಕಿತ್ಸೆ ತೂಕವೇ ಅದೆಲ್ಲದಕ್ಕೆ ಸಮ ಎಂದು. ಮೂತ್ರ ತಡೆಯುವುದರಿಂದ ಪದೇಪದೇ ಕಾಣಿಸಿಕೊಳ್ಳುವ ಮೂತ್ರದ ಕಲ್ಲಿಗೆ ಬಸ್ತಿ ಪರಿಹಾರವಾಗಿದೆ. ಹಲವು ಬಾರಿ ಉಂಟಾಗುವ ಮೂತ್ರದ ಸೋಂಕಿಗೂ ಕೂಡ ಮೂತ್ರ ತಡೆಯುವುದು ಕಾರಣವಾಗಿರಬಹುದು. ಇದರ ಚಿಕಿತ್ಸೆಯು ಕೂಡ ಬಸ್ತಿಯಿಂದ ಸಾಧ್ಯ. ಅನೇಕ ರೀತಿಯ ಹೊಟ್ಟೆ ನೋವಿನಲ್ಲೂ ಈ ಚಿಕಿತ್ಸೆಯಿಂದ ಪರಿಹಾರವಿದೆ. ಹೀಗೆ ಮೂತ್ರ ವೇಗದಾರಣೆಯಿಂದ ಉಂಟಾದ ತೊಂದರೆಗಳನ್ನು ಆಯುರ್ವೇದದ ಚಿಕಿತ್ಸೆಗಳ ಮೂಲಕ ಪರಿಹಾರಸಿಕೊಂಡು ನಂತರದ ದಿನಗಳಲ್ಲಿ ಈ ವೇಗಗಳನ್ನು ತಡೆಯದಿರುವುದೇ ಆರೋಗ್ಯಕ್ಕೆ ಅಡಿಗಲ್ಲು.